ಕನ್ನಡ ಚಿತ್ರರಂಗದಲ್ಲಿ ಓ ಎಂಬ ಹಾರರ್ ಸಿನಿಮಾ ನಿರ್ದೇಶಿಸಿದ್ದ ಮಹೇಶ ಸಿ. ಅಮ್ಮಳ್ಳಿದೊಡ್ಡಿ ಇದೀಗ ಮತ್ತೊಂದು ಹೊಸ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ಪ್ರೇಮಕಥೆಯನ್ನು ಆರಿಸಿಕೊಂಡಿದ್ದಾರೆ. ಹೊಸ ಸಿನಿಮಾಗೆ 'ಲವ್' ಎಂಬ ಶೀರ್ಷಿಕೆ ಇಡಲಾಗಿದೆ. ಟೈಟಲ್ ಹೇಳುವಂತೆ ಇದೊಂದು ವಿಭಿನ್ನ ಪ್ರೇಮ ಕಥಾಹಂದರ ಒಳಗೊಂಡ ಸಿನಿಮಾ.
'ಒಂಟಿ ಅಲ್ಲ ನಾನೀಗ' ಹಾಡು ರಿಲೀಸ್ :ಇತ್ತೀಚೆಗೆ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ. ಈ ಹಿಂದೆ ರಿಲೀಸ್ ಆಗಿದ್ದ 'ಕಣ್ಮಣಿ' ಹಾಡಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಈ ಬೆನ್ನಲ್ಲೇ 'ಒಂಟಿ ಅಲ್ಲ ನಾನೀಗ' ಎಂಬ ಮಲೋಡಿ ಗಾನಲಹರಿ ಅನಾವರಣಗೊಂಡಿದೆ. ಹೃದಯ ಶಿವ ಸಾಹಿತ್ಯ ಬರೆದಿರುವ ಹಾಡಿಗೆ ಕೀರ್ತಿ ಮಾರಾತೆ ಧ್ವನಿಯಾಗಿದ್ದು, ಸಾಯಿಶ್ರೀ ಕಿರಣ್ ಟ್ಯೂನ್ ಹಾಕಿದ್ದಾರೆ. ಪ್ರೇಮಿಗಳ ನಡುವಿನ ಮಧುರ ಪ್ರೇಮಗೀತೆಯಾಗಿರುವ ಈ ಹಾಡಿನಲ್ಲಿ ಯುವ ಪ್ರತಿಭೆಗಳಾದ ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ್ ಅಭಿನಯಿಸಿದ್ದಾರೆ.
ಸ್ಯಾಂಡಲ್ವುಡ್ಗೆ ಹೊಸ ಪ್ರತಿಭೆಗಳ ಪ್ರವೇಶ :ಲವ್ ಚಿತ್ರದ ಮೂಲಕ ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ ನಾಯಕ ಹಾಗೂ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಪರಿಚಯವಾಗುತ್ತಿದ್ದಾರೆ. ಕಾಂತಾರ ಸಿನಿಮಾ ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ, ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರಿ, ರಜತ್ ಶೆಟ್ಟಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.