ಕರ್ನಾಟಕ

karnataka

ETV Bharat / entertainment

ಕೊರಗಜ್ಜ ಚಿತ್ರಕ್ಕೆ ಸ್ವತಃ ಕನ್ನಡದಲ್ಲಿಯೇ ಡಬ್ಬಿಂಗ್ ಮಾಡಿದ ಹಾಲಿವುಡ್ ಮತ್ತು ಬಾಲಿವುಡ್ ನಟ - Produced by Trivikrama Sapalya

ಕನ್ನಡ, ತುಳು, ಮಲಯಾಳಂ ಭಾಷೆಗಳಲ್ಲಿ ಹಾಲಿವುಡ್ ಬಾಲಿವುಡ್ ನಟ ಕಬೀರ್ ಬೇಡಿ ಡಬ್ಬಿಂಗ್ ಮಾಡುತ್ತಿದ್ದಾರೆ.

ನಟ ಕಬೀರ್ ಬೇಡಿ ಡಬ್ಬಿಂಗ್
ನಟ ಕಬೀರ್ ಬೇಡಿ ಡಬ್ಬಿಂಗ್

By

Published : May 25, 2023, 3:24 PM IST

ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಹಾಲಿವುಡ್ - ಬಾಲಿವುಡ್ ನಟ ಕಬೀರ್ ಬೇಡಿ ಅಭಿನಯಿಸುತ್ತಿರುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ಧಿಯಾಗಿತ್ತು. ಇದೀಗ ಚಿತ್ರದಲ್ಲಿ ಬರುವ ತನ್ನ ಪಾತ್ರಕ್ಕೆ ಸ್ವತಃ ಕನ್ನಡದಲ್ಲಿಯೇ ನಟ ಕಬೀರ್ ಬೇಡಿ ಡಬ್ಬಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.​ ಸುಧೀರ್ ಅತ್ತಾವರ್ ನಿರ್ದೇಶನದ "ಕೊರಗಜ್ಜ" ಚಿತ್ರದಲ್ಲಿ ಬರುವ "ಉದ್ಯಾವರ ಅರಸರ" ಪಾತ್ರವನ್ನು ಕಬೀರ್ ಬೇಡಿ ಸಮರ್ಥವಾಗಿ ನಿಭಾಯಿಸಿದ್ದು, ಮಾತ್ರವಲ್ಲದೇ ನಿರ್ದೇಶಕರ "ವಿಷುವಲ್ ಇಮೇಜಿನೇಷನ್"ನನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ.

ಕೊರಗಜ್ಜ ಚಿತ್ರಕ್ಕೆ ಕನ್ನಡದಲ್ಲಿಯೇ ಡಬ್ಬಿಂಗ್ ಮಾಡಿದ ನಟ ಕಬೀರ್ ಬೇಡಿ

ಕೇರಳದ ಕಾಸರಗೋಡು ಜಿಲ್ಲೆಯ ಉದ್ಯಾವರದಲ್ಲಿನ ರಾಷ್ಟ್ರೀಯ ಹೆದ್ದಾರಿಯ ಬಲ ಬದಿಯಲ್ಲಿ ಉದ್ಯಾವರ ಅರಸರ ಸಾನಿಧ್ಯ ಇರುವ ಬಹಳ ದೊಡ್ಡ ದೈವಸ್ಥಾನವಿದೆ."ಕೊರಗಜ್ಜ" ಸಿನಿಮಾದಲ್ಲಿ ಹಿರಿಯ ನಟಿ ಭವ್ಯ ಅವರು ಉದ್ಯಾವರ ಅರಸರನ್ನು ಎದುರುಹಾಕಿಕೊಳ್ಳುವ "ಪಂಜಂದಾಯಿ" ಎನ್ನುವ (ಈಗ ದೈವವೆಂದು ಪೂಜೆಗೊಳಪಟ್ಟಿರುವ)ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಪಾತ್ರಗಳು ರಣರಂಗದಲ್ಲಿ ಸಂಧಿಸುವ ರೋಚಕ ಘಟನೆಯನ್ನು ಐದು ಕ್ಯಾಮರಾಗಳಲ್ಲಿ ಚಿತ್ರೀಕರಿಸಿದ್ದು,ಇದು ಚಿತ್ರದ ಹೈಲೈಟ್ ಗಳಲ್ಲಿ ಒಂದಾಗಿದೆ.

ಶೂಟಿಂಗ್ ನಡೆಯುವ ಸಂದರ್ಭದಲ್ಲಿ ಕಬೀರ್ ಬೇಡಿ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡುತ್ತೇನೆ ಎಂದಿದ್ದರಂತೆ. ಆದರೆ ನಿರ್ದೇಶಕ ಸುಧೀರ್ ಅತ್ತಾವರ್ ರವರಿಗೆ ಕಬೀರ್ ಬೇಡಿ ಕನ್ನಡದಲ್ಲಿ ಸಂಭಾಷಣೆಯನ್ನು ಮಾಡುತ್ತಾರೆ ಎನ್ನುವುದನ್ನು ಅಷ್ಟು ಸುಲಭವಾಗಿ ಸ್ವೀಕರಿಸಲು ಸಾಧ್ಯವಿರಲಿಲ್ಲ. ಕಾರಣ ಬಾಲಿವುಡ್, ಹಾಲಿವುಡ್, ಯುರೋಪಿಯನ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ನಟ ಏಕಾಏಕಿ ದಕ್ಷಿಣ ಭಾರತದ ಅದರಲ್ಲೂ ಕನ್ನಡ-ತುಳು-ಮಲಯಾಳಂ ಭಾಷೆಗಳ ಸೊಗಡನ್ನು ಅರಿತು, ಅದರ ಏರಿಳಿತ ಮತ್ತು ಭಾವನೆಗಳನ್ನು ಪಾತ್ರಕ್ಕೆ ಅಳವಡಿಸಿಕೊಂಡು, ಗ್ರಾಮ್ಯ ಮತ್ತು ಸ್ವಾಭಾವಿಕ ಶೈಲಿಯಲ್ಲಿ ಧ್ವನಿಯನ್ನು ಏರಿಳಿತಗೊಳಿಸುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ.

ಆದರೆ, ಈ ಸವಾಲುಗಳನ್ನು ಕಬೀರ್ ಬೇಡಿ ಅತ್ಯಂತ ಸಮರ್ಪಕವಾಗಿ ಎದುರಿಸಿ, ತನ್ನ ಪಾತ್ರಕ್ಕೆ ಮುಂಬೈನ ಪ್ರತಿಷ್ಟಿತ ಸ್ಟುಡಿಯೋ ಒಂದರಲ್ಲಿ ದಿನಕ್ಕೆ ಎರಡು-ಮೂರು ಸಂಭಾಷಣೆಯನ್ನು ಒಪ್ಪಿಸುತ್ತಾ ಡಬ್ಬಿಂಗ್ ನಡೆಸುತ್ತಿದ್ದಾರೆ. ಕಾಂತಾರ" ನಂತರ ದೈವದ ಕಥೆಯಾಧಾರಿತ ಚಿತ್ರದ ಬಗ್ಗೆ ಹೆಚ್ಚು ಕುತೂಹಲ ಮೂಡಿಸಿದೆ. ಮುಂಬೈ ಮಾಧ್ಯಮಗಳು ತ್ರಿವಿಕ್ರಮ ಸಾಪಲ್ಯ ರವರು ನಿರ್ಮಿಸುತ್ತಿರುವ "ಕೊರಗಜ್ಜ" ಸಿನಿಮಾಗೆ ಕಬೀರ್ ಬೇಡಿ ಡಬ್ಬಿಂಗ್ ಮಾಡುವ ವಿಚಾರವನ್ನು ದೊಡ್ಡ ಮಟ್ಟದ ಸುದ್ಧಿಯಾಗಿಸಿವೆ.

ನಾಲ್ಕೈದು ಕ್ಯಾಮರಾಗಳನ್ನು ಬಳಸಿಕೊಂಡು ಚಿತ್ರೀಕರಿಸಿದ್ದ ಈ ಚಿತ್ರದ ಎಡಿಟಿಂಗ್ ಕೂಡಾ ಅತ್ಯಂತ ಸವಾಲಿನ ಕೆಲಸವಾಗಿತ್ತು. ಖ್ಯಾತ ಸಂಕಲನಕಾರ ಸುರೇಶ್ ಅರಸ್ ಜೊತೆ ವಿದ್ಯಾಧರ್ ಶೆಟ್ಟಿ ಕೂಡಾ ಸಂಕಲನಕಾರರಾಗಿ ಚಿತ್ರಕ್ಕೆ ದುಡಿದಿದ್ದಾರೆ. ಚಿತ್ರದ ಸೌಂಡ್ ಡಿಸೈನ್ ಮತ್ತು ಪಾಲಿ ಕಾರ್ಯಕ್ಕಾಗಿ ದೇಶದ ಪ್ರತಿಭಾನ್ವಿತ ಡಿಸೈನರ್​ಗಳು ಕೈ ಜೋಡಿಸುತ್ತಿದ್ದಾರೆ. ಮುಂಬೈ ಹಾಗೂ ವಿದೇಶಗಳಲ್ಲಿ ಈ ಕೆಲಸವನ್ನು ಮಾಡಲು ಈಗಾಗಲೇ ಕಾರ್ಯತಂತ್ರ ರೂಪಿಸಿಕೊಳ್ಳಲಾಗುತ್ತಿದೆ.

ಜೊತೆಗೆ ಕ್ಲೈಮ್ಯಾಕ್ಸ್ ಅನ್ನು ಮರು ಚಿತ್ರೀಕರಿಸಿದ್ದ ಚಿತ್ರತಂಡವು ಮೈನವಿರೇಳಿಸುವ ಗ್ರಾಫಿಕ್ಸನ್ನು ಕ್ಲೈಮ್ಯಾಕ್ಸ್ ನಲ್ಲಿ ಅಳವಡಿಸಿಕೊಳ್ಳುತ್ತಿದೆ. ಒಟ್ಟಾರೆ ಮಹತ್ವಾಕಾಂಕ್ಷೆಯ ಬಿಗ್ ಬಜೆಟ್​ ಹಾಕಿರುವ "ಕೊರಗಜ್ಜ" ಸಿನಿಮಾದ ಮೇಕಿಂಗ್ ವಿಚಾರದಲ್ಲಿ ಎಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದೆ ಅದ್ಬುತವಾಗಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದ್ದು, ಚಿತ್ರದ ಬಗ್ಗೆ ಎಲ್ಲರ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.

ಇದನ್ನೂ ಓದಿ :ವಾಮಾಚಾರದ ಸುತ್ತ 'ಗದಾಯುದ್ಧ' ಮಾಡಲು ರೆಡಿಯಾದ ಯುವ ನಟ ಸುಮಿತ್

ABOUT THE AUTHOR

...view details