ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಂಗಳೂರು ಬಂದ್ಗೆ ಕರೆ ನೀಡಲಾಗಿದ್ದು ಈಗಾಗಲೇ ಹಲವು ಸಂಘಟನೆಗಳು ತಮ್ಮ ಬೆಂಬಲವನ್ನು ಸೂಚಿಸಿವೆ. ಅದೇ ರೀತಿ ಕನ್ನಡ ಚಿತ್ರೋದ್ಯಮದಿಂದಲೂ ಬಂದ್ಗೆ ನೈತಿಕ ಬೆಂಬಲ ವ್ಯಕ್ತವಾಗಿದೆ.
ಬೆಂಗಳೂರು ಬಂದ್ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ ಎನ್ ಎಂ ಸುರೇಶ್ ಮಾತನಾಡಿ, ನಾವು ಡಾ. ರಾಜ್ ಕುಮಾರ್ ಅವರ ಆದರ್ಶಗಳನ್ನು ಪಾಲಿಸುತ್ತಿರುವವರು. ಹೀಗಾಗಿ ನಾವು ಕನ್ನಡ ಚಿತ್ರರಂಗದಿಂದ ನಾಳೆಯ ಬಂದ್ಗೆ ನೈತಿಕ ಬೆಂಬಲ ನೀಡಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರು ಬಂದ್ಗೆ ಚಿತ್ರೋದ್ಯಮದಿಂದ ಬೆಂಬಲ ಇನ್ನು ಅಣ್ಣಾವ್ರು ಹೇಳಿದಂತೆ ನಾಡು, ನೆಲ, ಜಲ ಅಂತಾ ಬಂದಾಗ ನಾವೆಲ್ಲ ಒಂದು. ನಮ್ಮ ನಾಡು ನುಡಿಗೆ ಅದರಲ್ಲೂ ರೈತರ ಹೋರಾಟದಲ್ಲಿ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಟ, ನಟಿಯರು, ಪೋಷಕ ಕಲಾವಿದರು ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞಾನರು ಸಾಥ್ ಕೊಡಲಿದ್ದಾರೆ. ಅದೇ ರೀತಿ ಚಿತ್ರೋದ್ಯಮದಿಂದ ನಾಳೆಯ ಬಂದ್ಗೆ ಬೆಂಬಲ ಸೂಚಿಸಿದ್ದೇವೆ. ಈ ನಿಟ್ಟಿನಲ್ಲಿ ನಾಳೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನ ಸೇರಿದಂತೆ ಸಿನಿಮಾಗಳ ಶೂಟಿಂಗ್ ಸಹ ಸ್ಥಗಿತಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ನಾಳೆ ನಡೆಯಲಿರುವ ಬೆಂಗಳೂರು ಬಂದ್ಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಂಘಟನೆ ಕೂಡ ಬೆಂಬಲ ನೀಡಿದೆ. ಮಂಗಳವಾರದಂದು ಕಿರುತೆರೆಗೆ ಸಂಬಂಧಿಸಿದ ಯಾವುದೇ ಚಿತ್ರೀಕರಣ ನಡೆಯುವುದಿಲ್ಲ ಎಂದು ಸಂಘದ ಅಧ್ಯಕ್ಷ ಗಣೇಶ್ ರಾವ್ ಕೇಸರ್ಕರ್ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗ ಕೂಡ ಬಂದ್ನಲ್ಲಿ ಭಾಗಿಯಾಗಿದೆ. ಕಾವೇರಿ ನಮ್ಮೆಲ್ಲರ ತಾಯಿ. ಅದು ಕರುನಾಡಿನ ಜೀವ ನದಿ. ಈ ಸಮಸ್ಯೆಯನ್ನು ಎಲ್ಲರೂ ಆದಷ್ಟು ಬೇಗ ಬಗೆಹರಿಸಬೇಕು ಅಂತ ಕೇಳಿಕೊಳ್ಳುತ್ತೇನೆ. ನಮ್ಮ ಹಿರಿಯ ನಟರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಒಬ್ಬ ರೈತನ ಮಗನಾಗಿ, ಕನ್ನಡಿಗರಾಗಿ ನಾವೆಲ್ಲರೂ ಈ ಹೋರಾಟದಲ್ಲಿ ಇರುತ್ತೇವೆ ಎಂದು ನಟ ಧ್ರುವ ಸರ್ಜಾ ಕೂಡ ಹೋರಾಟಕ್ಕೆ ಸಾಥ್ ನೀಡಿದ್ದಾರೆ.
ಇದನ್ನೂ ಓದಿ:ಕಾವೇರಿ ಕಿಚ್ಚು: ಎರಡು ಬಣಗಳ ನಡುವೆ ಮೂಡದ ಒಮ್ಮತ... ನಾಳೆ ಬೆಂಗಳೂರು, ಸೆ.29ಕ್ಕೆ ಕರ್ನಾಟಕ ಬಂದ್
ಒಂದೇ ವಾರದಲ್ಲಿ ಎರಡು ಬಂದ್:ಕಾವೇರಿ ಕಣಿವೆಯಲ್ಲಿ ಮಳೆ ಕೊರತೆ ಹಿನ್ನೆಲೆ ಕೆಆರ್ಎಸ್ ಜಲಾಶಯ ಸೇರಿ ವಿವಿಧ ಡ್ಯಾಂಗಳಲ್ಲಿ ನೀರು ಬರಿದಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರ ಧೋರಣೆ ಖಂಡನೀಯ. ಕೂಡಲೇ ನೀರು ನಿಲ್ಲಿಸಿ ರಾಜ್ಯ ರೈತರ ಹಿತ ಕಾಪಾಡಲು ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘಟನೆ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ ವಿವಿಧ ಸಂಘಟೆಗಳು ನಾಳೆ ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದಾರೆ. ಈ ಬಂದ್ಗೆ ಕನ್ನಡ ಹಾಗೂ ರೈತಪರ ಸಂಘಟನೆಗಳು ಸೇರಿ ವಿವಿಧ ಸಂಘ ಸಂಸ್ಥೆಗಳು ಒಂದೇ ವಾರದಲ್ಲಿ ಎರಡು ಬಂದ್ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಿವೆ.