ರಂಗ ಭೂಮಿ ಮತ್ತು ಕನ್ನಡ ಹಾಗೂ ಪರಿಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ ಪ್ರಖ್ಯಾತ ನಟ ಮನದೀಪ್ ರಾಯ್ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಭೈರಸಂದ್ರದ ತಮ್ಮ ನಿವಾಸದಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅವರು ನಿಧನರಾದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹಾಸ್ಯನಟ ಮನ್‌ದೀಪ್ ರಾಯ್ ಅವರಿಗೆ 73 ವಯಸ್ಸಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಹೃದಯಾಘಾತ ಸಂಭವಿಸಿದ್ದು ಬೆಂಗಳೂರಿನ ಶೇಷಾದ್ರಿಪುರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಕೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರಿ ಅಕ್ಷತಾ ಮಾಹಿತಿ ನೀಡಿದ್ದಾರೆ.
ಕನ್ನಡದ ಖ್ಯಾತ ಹಾಸ್ಯನಟ ಮನದೀಪ್ ರಾಯ್ ಇನ್ನಿಲ್ಲ - ಸ್ಯಾಂಡಲ್ವುಡ್
ಕನ್ನಡದ ಖ್ಯಾತ ಹಿರಿಯ ನಟ ಮನದೀಪ್ ರಾಯ್ ಇನ್ನಿಲ್ಲ. ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಹೆಬ್ಬಾಳ ಚಿತಾಗಾರದಲ್ಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಲಿದೆ.
500ಕ್ಕೂ ಹೆಚ್ಚು ಸಿನಿಮಾ:ಕನ್ನಡದ ಹಿರಿಯ ನಟರಾದ ಅನಂತ್ ನಾಗ್, ಶಂಕರ್ ನಾಗ್, ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಸುದೀಪ್ ಸೇರಿದಂತೆ ಇಂದಿನ ಯುವ ನಟರ ಜೊತೆಯೂ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಮಿಂಚಿನ ಓಟ, ಬಾಡದ ಹೂವು, ಆಕಸ್ಮಿಕ, ಅಗ್ನಿ ಐಪಿಎಸ್, ದೀಪಾವಳಿ, ಅಯ್ಯ, ಅಪೂರ್ವ ಸಂಗಮ, ಪ್ರೀತ್ಸದ್ ತಪ್ಪಾ, ಆಂಟಿ ಪ್ರೀತ್ಸೆ, ಏಳು ಸುತ್ತಿನ ಕೋಟೆ, ಸಂಕಷ್ಟಕರ ಗಣಪತಿ, ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ, ಓ ಪ್ರೇಮವೆ, ಬೆಂಕಿಯ ಬಲೆ, ಆಪ್ತರಕ್ಷಕ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಮನ್‌ದೀಪ್ ರಾಯ್ ಅಭಿನಯಿಸಿದ್ದರು. ದಶಕಗಳ ಕಾಲ ಸಿನಿರಸಿಕರನ್ನು ತಮ್ಮ ಹಾಸ್ಯದಿಂದಲೇ ಮನ್ ದೀಪ್ ರಾಯ್ ರಂಜಿಸಿದ್ದರು. ಹಿರಿಯ ನಟನ ಅಗಲಿಕೆಗೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಡಾ.ರಾಜ್ಕುಮಾರ್ ಅಭಿನಯದ 'ಸಾಕ್ಷಾತ್ಕಾರ' ಚಿತ್ರದ ನಟಿ ಜಮುನಾ ಇನ್ನಿಲ್ಲ