ಡಾ. ರಾಜ್ ಕುಮಾರ್, ಶಂಕರ್ ನಾಗ್, ಅನಂತ್ ನಾಗ್ರಂತಹ ಮೇರು ನಟರ ಜೊತೆ ಅಭಿನಯಿಸಿದ ಹಾಸ್ಯ ನಟ ಮನ್‌ದೀಪ್ ರಾಯ್ ಅವರಿಗೆ ಹೃದಯಾಘಾತವಾಗಿದೆ. ಮೂರು ದಿನಗಳ ಹಿಂದೆ ಮನ್ ದೀಪ್ ರಾಯ್ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಮನ್ ದೀಪ್ ರಾಯ್ ಅವರಿಗೆ ಚಿಕಿತ್ಸೆಗೆ ಹಣಕಾಸಿನ ತೊಂದರೆ ಉಂಟಾಗಿರುವುದರಿಂದ ಆರ್ಥಿಕ ನೆರವಿನ ಅವಶ್ಯಕತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಮನದೀಪ್ ರಾಯ್ ಹೃದಯಾಘಾತದಿಂದ ಆಸ್ಪತ್ರೆಗೆ ಸೇರಿರುವ ವಿಚಾರ ಚಿತ್ರೋದ್ಯಮಕ್ಕೆ ತಿಳಿಯುತ್ತಿದ್ದಂತೆಯೇ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಲವರು ಹಾರೈಸಿದ್ದಾರೆ. ಇನ್ನು ಕೆಲ ಆಪ್ತರು ಆಸ್ಪತ್ರೆಗೆ ಭೇಟಿ ನೀಡಿ, ಮನ್ ದೀಪ್ ರಾಯ್ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಮನದೀಪ್ ರಾಯ್ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.