ನಟ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 10' ಬಹುತೇಕ ಫಿನಾಲೆ ಹಂತಕ್ಕೆ ತಲುಪಿದೆ. ಈಗಾಗಲೇ 13 ವಾರಗಳು ಪೂರ್ಣಗೊಂಡಿದ್ದು, 14ನೇ ವಾರದ ಎಪಿಸೋಡ್ಗಳು ಪ್ರಸಾರವಾಗುತ್ತಿವೆ. ಕಳೆದ ವಾರಾಂತ್ಯ ಮೈಕಲ್ ದೊಡ್ಮನೆಯಿಂದ ಹೊರ ನಡೆದಿದ್ದಾರೆ. ಹದಿನಾಲ್ಕನೇ ವಾರ ಕೂಡ ವಾದ ವಿವಾದಗಳಿಂದಲೇ ಆರಂಭಗೊಂಡಿದ್ದು, ವಿನಯ್ ಪ್ರತಾಪ್ ನಡುವಿನ ವಾಗ್ಯುದ್ಧ ಮುಂದುವರಿದಿದೆ. ನಿನ್ನೆಯ ಮಾತಿನ ಚಕಮಕಿಯ ಪರಿಣಾಮ ಇಂದಿನ ನಾಮಿನೇಶನ್ ಮೇಲೂ ಬೀರಿದೆ. ಇದರ ಸುಳಿವು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸಿಕ್ಕಿದೆ.
ಹೌದು ಪಾಪ್ಯುಲರ್ ಶೋ ಕನ್ನಡ ಬಿಗ್ ಬಾಸ್ ಸೀಸನ್ 10ರ ಫೈನಲ್ ಹಂತಕ್ಕೆ ಇನ್ನು ಎರಡೇ ಹೆಜ್ಜೆ ಬಾಕಿ. ಈ ಹಂತದಲ್ಲಿ ಮನೆಯೊಳಗೆ ಸ್ಪರ್ಧಿಗಳ ಪೈಪೋಟಿ, ಮಾತಿನ ಚಕಮಕಿ ಜೋರಾಗೇ ನಡೆಯುತ್ತಿದೆ. ವಾರದ ಆರಂಭದಲ್ಲಿ ಎಂದಿನಂತೆ ನಾಮಿನೇಷನ್ ಚಟುವಟಿಕೆ ನಡೆದಿದೆ. ಅದರ ಝಲಕ್ ಕಲರ್ಸ್ ಕನ್ನಡ ಅನಾವರಣಗೊಳಿಸಿರುವ ಪ್ರೋಮೋದಲ್ಲಿ ಕಾಣಿಸಿಕೊಂಡಿದೆ. ''ನಾಮಿನೇಶನ್ ಬಿಸಿ!'' ಶೀರ್ಷಿಕೆಯಡಿ ಸೋಷಿಯಲ್ ಮೀಡಿಯಾಗಳಲ್ಲಿ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.
ಮನೆಯಲ್ಲಿರುವ ಪ್ರತೀ ಸ್ಪರ್ಧಿಗಳ ಮೈ ಮೇಲೆ ಹೃದಯಾಕಾರದ ಬೋರ್ಡ್ ಅನ್ನು ನೇತುಹಾಕಲಾಗಿದೆ. ಕ್ಯಾಪ್ಟನ್ ಸಂಗೀತಾ ಹೊರತುಪಡಿಸಿ ಎಲ್ಲಾ ಸ್ಪರ್ಧಿಗಳೂ ತಾವು ನಾಮಿನೇಷನ್ ಮಾಡಲು ಇಚ್ಛಿಸುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಅವರ ಕತ್ತಿನಲ್ಲಿ ತೂಗು ಹಾಕಿದ್ದ ಬೋರ್ಡ್‌ಗೆ ಚೂರಿ ಹಾಕಬೇಕು. ಇದೇ ನಾಮಿನೇಶನ್ ಪ್ರಕ್ರಿಯೆ.