ಕನ್ನಡದ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 10'ರ ಪ್ರಸ್ತುತ ವಾರ ಭರಪೂರ ಭಾವುಕ ಕ್ಷಣಗಳಿಂದ ತುಂಬಿತ್ತು. ದೊಡ್ಮನೆಯೊಳಗೆ ಪ್ರವೇಶಿಸಿದ ಎಲ್ಲಾ ಸ್ಪರ್ಧಿಗಳ ಕುಟುಂಬಸ್ಥರು, ಎಲ್ಲಾ ಸದಸ್ಯರಿಗೂ ಕಿವಿಮಾತು ಹೇಳಿ ಹೋಗಿದ್ದಾರೆ. ಬಿಗ್ ಬಾಸ್ ಕುಟುಂಬದ ಬಂಧವನ್ನು ಮತ್ತಷ್ಟು ಗಟ್ಟಿ ಮಾಡಿದ್ದಾರೆ. ವಾರವಿಡೀ ಹಲವು ಹೃದಯಸ್ಪರ್ಶಿ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದ ಬಿಗ್ ಬಾಸ್ ಮನೆ ವಾರಾಂತ್ಯದ ಹೊತ್ತಿಗೆ ಮತ್ತದೇ ಮೊದಲಿನ ಹಳಿಗೆ ಮರಳುತ್ತಿದೆ ಎಂಬಂತೆ ತೋರುತ್ತಿದೆ.
ಬಿಗ್ ಬಾಸ್ ಹೊಸ ಪ್ರೋಮೋ: 'ಕ್ಯಾಪ್ಟನ್ ಯಾರು?' ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಉತ್ತರದ ಜೊತೆಗೆ ಕಿಚ್ಚನ ವಾರಾಂತ್ಯದ ಎಪಿಸೋಡ್‌ಗಳಲ್ಲಿ ಭಾಗಿಯಾಗಲು ಸದಸ್ಯರು ಕಾಯುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರದ ಸುಳಿವು ಇಂದು ಜಿಯೋಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕಂಡುಬಂದಿದೆ. ಅಲ್ಲದೇ ಇಂದೇ ಬಿಡುಗಡೆ ಆಗಿರುವ ಮತ್ತೊಂದು ಪ್ರೋಮೋದಲ್ಲಿ, ವರ್ತೂರ್ ಸಂತೋಷ್ 'ಕಳಪೆ' ಪಟ್ಟದ ಬಟ್ಟೆ ಧರಿಸಿ, ಜೈಲಿನೊಳಗೆ ಹೋಗಿದ್ದಾರೆ. 'ಮನೆಯವರ ತೀರ್ಮಾನದ ವಿರುದ್ಧ ತಿರುಗಿಬಿದ್ರಾ ವರ್ತೂರ್ ಸಂತೋಷ್! 'ಮತ್ತು 'ಪ್ರತಾಪ್ ಕೈ ತಪ್ಪಿ ಹೋಗುತ್ತಾ ಕ್ಯಾಪ್ಟನ್ ಆಗುವ ಅವಕಾಶ?' ಎಂಬೆರಡು ಶೀರ್ಷಿಕೆಯಡಿ ಬಿಗ್ ಬಾಸ್ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಜೈಲಿಗೆ ಹೋದ ವರ್ತೂರ್ ಸಂತೋಷ್: 'ಯಾವ ಒಬ್ಬರ ಸದಸ್ಯರ ಪ್ರಯಾಣ ಸ್ಲೋ ಮೋಷನ್ ಆಗಿದೆ ಎಂದು ತಿಳಿಸಿ' ಅಂತಾ ಬಿಗ್ ಬಾಸ್ ಪತ್ರದಲ್ಲಿ ಸೂಚಿಸಿದ್ದಾರೆ. 'ಹಿಂದೆ ಉಳಿತಿದ್ದಾರೆ ಅಂತಾ ಅನಿಸಿದ್ದು ವರ್ತೂರ್ ಸಂತೋಷ್ ಅವರು' ಎಂದು ಸಂಗೀತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ' ಎಂದು ನಮ್ರತಾ ತಿಳಿಸಿದ್ದಾರೆ. 'ಪ್ರತಿ ಮಾತಿಗೂ ಜನಕ್ಕೆ ನಾನು ಉತ್ತರ ಕೊಟ್ರೆ ಸಾಕು' ಎಂದು ವರ್ತೂರ್ ಸಂತೋಷ್ ತಿಳಿಸುತ್ತಾರೆ ಎಂದು ಕಾರ್ತಿಕ್ ತಿಳಿಸಿದ್ದಾರೆ. ಹೀಗೆ ಪ್ರತಿಯೊಬ್ಬರ ಮಾತಿಗೂ ತಮ್ಮದೇ ಆದ ರೀತಿಯಲ್ಲಿ ಉತ್ತರ ಕೊಟ್ಟ ವರ್ತೂರ್ ಸಂತೋಷ್ ಕಳಪೆ ಪಟ್ಟದ ಬಟ್ಟೆ ಧರಿಸಿ ಜೈಲಿಗೆ ಹೋಗ್ತಾರೆ.