ನಟ ಸುದೀಪ್ ನಿರೂಪಣೆಯ ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ ದಿನದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಆಟಗಳು ವಿಭಿನ್ನ ರೂಪ ಪಡೆದುಕೊಳ್ಳುತ್ತಿವೆ. ನೋಡುಗರಿಗೂ ಹೊಸ ವಿಚಾರಗಳು ಲಭ್ಯವಾಗುತ್ತಿವೆ. ಪ್ರೀತಿ, ಸ್ನೇಹ, ಮನಸ್ತಾಪ ಸೇರಿದಂತೆ ನಾನಾ ಭಾವನೆಗಳು ಅಭಿವ್ಯಕ್ತವಾಗುತ್ತಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗುತ್ತಿದೆ.
ಬಿಗ್‌ಬಾಸ್ ಮನೆಯಲ್ಲಿ ನಗೆಬುಗ್ಗೆ: ಕಳೆದ ಕೆಲವು ದಿನಗಳಿಂದ ಸ್ಫರ್ಧಿ ತುಕಾಲಿ ಸಂತೋಷ್ ಗಂಭೀರವಾಗಿದ್ದರು. ಮೊದಲ ವಾರ ಅವರು ಮಾಡಿದ್ದ ಕಾಮಿಡಿಯ ಕ್ವಾಲಿಟಿ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ತರಾಟೆ ಮಾಡಿದ್ದರು. ನಿಮ್ಮ ಕಾಮಿಡಿ ಬೇರೆಯವರ ಮನಸ್ಸು ನೋಯಿಸುತ್ತದೆ ಎಂಬ ಮಾತು ಪದೇ ಪದೇ ಮನೆಮಂದಿಯ ಬಾಯಲ್ಲಿ ಬರುತ್ತಿತ್ತು. ಇದರ ಪರಿಣಾಮ, ಹಾಸ್ಯ ಮಾಡಲು ತುಕಾಲಿ ಸಂತೋಷ್ ಹಿಂಜರಿದು, ಕೊಂಚ ಗಂಭೀರವಾಗಿದ್ದರು. ಮನೆಯೊಳಗಿನ ಸನ್ನಿವೇಶಗಳು, ಟಾಸ್ಕ್‌ಗಳು ಮತ್ತು ಜಗಳಗಳೂ ಕೂಡ ಅವರು ಗಂಭೀರವಾಗಲು ಕಾರಣವಿರಬಹುದು. ಆದ್ರಿಂದು ಬಿಗ್‌ಬಾಸ್ ಮನೆಯಲ್ಲಿ ನಗುವಿನಲೆಗಳೆದ್ದಿವೆ. ಆ ಖುಷಿಯ ಅಲೆಗಳಲ್ಲಿ ಮನೆ ಸದಸ್ಯರು ಪರಸ್ಪರ ಭಿನ್ನಾಭಿಪ್ರಾಯ ಮರೆತು ನಕ್ಕು ನಲಿದಿದ್ದಾರೆ. ಇದಕ್ಕೆ ಕಾರಣ ತುಕಾಲಿ ಸಂತೋಷ್.
ತುಕಾಲಿ ಸಂತೋಷ್ಗೆ ಡಿಮ್ಯಾಂಡು:ಇಂದು ಸಂಜೆ ಪ್ರಸಾರವಾಗಲಿರುವ ಎಪಿಸೋಡ್ ಸಖತ್ ಎಂಟರ್ಟೈನಿಂಗ್ ಆಗಿರಲಿದೆ ಎಂಬುದರ ಸುಳಿವು ಜಿಯೋಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ. 'ತುಕಾಲಿ ಅವರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!' ಶೀರ್ಷಿಕೆಯಡಿ ಕಲರ್ಸ್ ಕನ್ನಡ ವಾಹಿನಿ ಅನಾವರಣಗೊಳಿಸಿರುವ ಪ್ರೋಮೋದಲ್ಲಿ, 'ಬಾರೇ ರಾಜಕುಮಾರಿ' ಎಂದು ಕಾರ್ತಿಕ್ ಅವರು ತುಕಾಲಿ ಸಂತೋಷ್ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಬಂದಾಗ ಇಡೀ ಮನೆಯೇ ದಂಗಾಗಿಬಿಟ್ಟಿತು. ಏಕೆಂದರೆ ತುಕಾಲಿ ಸಂತೋಷ್ ವೇಷ ಬದಲಾಗಿದೆ. ಹೌದು, ಅವರು 'ಚೂಡಿದಾರ ತೊಟ್ಟ ಮರಿಜಿಂಕೆ'ಯಾಗಿ ಬದಲಾಗಿದ್ದಾರೆ. ವರ್ತೂರ್ ಸಂತೋಷ್ ಹೆಗಲಿಗೆ ಕೈ ಹಾಕಿ ನುಲಿಯುತ್ತಾ, 'ವರ್ತೂ..ಯಾಕೆ ನನ್ನನ್ನು ಬಿಟ್ಟು ಒಬ್ನೇ ಟೊಮೊಟೋ ಮಾರೋಕೆ ಹೋಗಿದ್ದೆ' ಎಂದು ಹೇಳಿದಾಗಲಂತೂ ಮನೆಯವರೆಲ್ಲ ಬಿದ್ದು ಬಿದ್ದು ನಕ್ಕರು.