ಅಭಿನಯ ಚಕ್ರವರ್ತಿ ಸುದೀಪ್ ನಿರೂಪಣೆಯ ಕನ್ನಡದ ಜನಪ್ರಿಯ ಕಾರ್ಯಕ್ರಮ ''ಬಿಗ್ ಬಾಸ್'' ಸೀಸನ್ 10ರ ನಾಲ್ಕನೇ ವಾರ ಈ ಹಿಂದಿನಷ್ಟು ಶಾಂತವಾಗಿಲ್ಲ. ಟಾಸ್ಕ್ ಸೇರಿದಂತೆ ಸ್ಪರ್ಧಿಗಳ ನಡುವಿನ ಮನಸ್ತಾಪದ ಕಾವು ಜೋರಾದಂತೆ ಕಾಣುತ್ತಿದೆ. ಜಿದ್ದಾಜಿದ್ದಿನ ಟಾಸ್ಕ್ ನಡುವೆ ಅಂತಿಮವಾಗಿ ವಿನಯ್ ಅವರು ಮನೆಯ ಕ್ಯಾಪ್ಟನ್ ಆಗಿದ್ದಾರೆ.
ಆಟದಲ್ಲೀಗ ಹೊಸ ಮಜಲು!ಹೌದು, ಕೊನೆಗೂ ವಿನಯ್ ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗುವಲ್ಲಿ ಯಶ ಕಂಡಿದ್ದಾರೆ. ಮೊದಲನೇ ವಾರದಿಂದಲೂ ಕ್ಯಾಪ್ಟನ್ ಆಗಲು ಪ್ರಯತ್ನಿಸುತ್ತಲೇ ಇದ್ದ ವಿನಯ್ ಅವರಿಗೆ ನಾಲ್ಕನೇ ವಾರದಲ್ಲಿ ಯಶಸ್ಸು ದೊರಕಿದೆ. ಈ ಯಶಸ್ಸು ಇಡೀ ಮನೆಯ ಇಕ್ವೇಷನ್ ಅನ್ನೇ ಬದಲಿಸುವ ಹಾಗಿದೆ. ಜಿಯೋ ಸಿನಿಮಾ, ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕ್ಯಾಪ್ಟನ್ ವಿನಯ್ ಖದರ್ನ ಝಲಕ್‌ಗಳಿವೆ. 'ಕ್ಯಾಪ್ಟನ್ ಪಟ್ಟಕ್ಕೆ ವಿನಯ್ ಆಯ್ಕೆ; ಆಟದಲ್ಲೀಗ ಹೊಸ ಮಜಲು!' ಎಂಬ ಶೀರ್ಷಿಕೆಯಡಿ ಸೋಷಿಯಲ್ ಮೀಡಿಯಾದಲ್ಲಿ ಅನಾವರಣಗೊಂಡಿರುವ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
ವಿನಯ್ಗೆ ಕ್ಯಾಪ್ಟನ್ ಪಟ್ಟ: ಹಳ್ಳಿ ಜೀವನದ ಟಾಸ್ಕ್‌ನಲ್ಲಿ ವಿನಯ್ ತಂಡ ಗೆದ್ದು ಬೀಗಿತ್ತು. ಸಂಗೀತಾ ತಂಡ ಸೋತು ತಣ್ಣಗಾಗಿತ್ತು. ಹಾಗಾಗಿ, ವಿನಯ್ ತಂಡದ ಎಲ್ಲರ ಜೊತೆ ತುಕಾಲಿ ಸಂತೋಷ್ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹರಾಗಿದ್ದರು. ಟಾಸ್ಕ್‌ನಲ್ಲಿ ಕೊನೆಗೆ ಉಳಿದಿದ್ದು ತುಕಾಲಿ ಸಂತೋಷ್ ಮತ್ತು ವಿನಯ್ ಇಬ್ಬರೇ. ತುಕಾಲಿ ಸಂತೋಷ್ ಅವರಿಗೆ ವಿನಯ್ ಅವರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗೆ ಹಾಕುವ ಅವಕಾಶವಿದ್ದಾಗಲೂ ಕೂಡ ಅದನ್ನು ಬಳಸಿಕೊಳ್ಳದೇ ಸಿರಿ ಅವರನ್ನು ಹೊರಗೆ ಹಾಕಿದ್ದರು. ಇದರ ಪರಿಣಾಮವಾಗಿ, ತುಕಾಲಿ ಸಂತೋಷ್ ತಾವೇ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೋತು ಕ್ಯಾಪ್ಟನ್ ಪಟ್ಟವನ್ನು ವಿನಯ್ ಅವರಿಗೆ ಬಿಟ್ಟುಕೊಡಬೇಕಾಯ್ತು.
ಸಂಗೀತಾ vs ವಿನಯ್: ಬಿಗ್ ಬಾಸ್ ಪ್ರಾರಂಭವಾದ ದಿನದಿಂದಲೂ ಸಂಗೀತಾ ವರ್ಸಸ್ ವಿನಯ್ ಜಟಾಪಟಿ ನಡೆಯುತ್ತಲೇ ಇದೆ. ಹಳ್ಳಿಜೀವನದ ಟಾಸ್ಕ್‌ಗಳಲ್ಲೊಂತೂ ಅದು ಅತಿರೇಕಕ್ಕೆ ಹೋಗಿತ್ತು. ಸಂಗೀತಾ ಮತ್ತು ಅವರ ತಂಡದ ಎಲ್ಲ ಸದಸ್ಯರೂ ವಿನಯ್ ಅವರನ್ನು ಕೆಣಕಿದ್ದರು. ಅವರ ಮಾತಿಗೆ ನೇರವಾಗಿ ಕೌಂಟರ್ ಕೊಟ್ಟು ವಿನಯ್ ಅವರನ್ನು ಸಾಕಷ್ಟು ಕೆರಳಿಸಿದ್ದರು. ಆದ್ರೀಗ ವಿನಯ್ ಮನೆಯ ಕ್ಯಾಪ್ಟನ್ ಆಗಿದ್ದಾರೆ.