ಕನ್ನಡ ಬಿಗ್ ಬಾಸ್ ಪ್ರೇಕ್ಷಕರ ಸಂಖ್ಯೆ ಏರುತ್ತಲೇ ಇದೆ. ದಿನಕ್ಕೊಂದು ಹೊಸ ಟಾಸ್ಕ್, ಸ್ಪರ್ಧಿಗಳ ತಂತ್ರ ಎಲ್ಲವೂ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿದೆ. ಮನೆಯೊಳಗೆ ಇಬ್ಬರು ಹೊಸ ಕಂಟೆಸ್ಟೆಂಟ್‌ಗಳು ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಅವರು ಮನೆಯೊಳಗಿನ ಸದಸ್ಯರ ಮನಸ್ಥಿತಿಯನ್ನು ಅರಿವು ಮಾಡಿಕೊಳ್ಳುತ್ತಿರುವಾಗಲೇ ಬಿಗ್ ಬಾಸ್ ಟಾಸ್ಕ್ ಒಂದನ್ನು ಕೊಟ್ಟಿದ್ದಾರೆ.
'ಆಟದಲ್ಲಿ ಹೆಚ್ಚಾಗಿದ್ದು, ಹೋರಾಟವೋ ಕಾದಾಟವೋ?': ಸ್ವಿಮಿಂಗ್ ಫೂಲ್‌ನಲ್ಲಿರುವ ನೀರನ್ನು ಬಕೆಟ್‌ನಲ್ಲಿ ತೆಗೆದುಕೊಂಡು ಕೊಳವೆಯ ಒಳಗೆ ಎಸೆಯಬೇಕು. ಎದುರಾಳಿ ತಂಡದವರು ಸ್ಪರ್ಧಿಗಳ ಗುರಿ ತಪ್ಪುವಂತೆ ಅವರನ್ನು ತಡೆಯಬೇಕು. ಇದು ಟಾಸ್ಕ್. ಆದರೆ, ಈ ನೀರಿನಾಟದಲ್ಲಿ ಕಿಡಿ ಹೊತ್ತಿಕೊಂಡಿರುವುದು ಇಂದಿನ ಪ್ರೋಮೋದಲ್ಲಿ ಬಹಿರಂಗಗೊಂಡಿದೆ. 'ಆಟದಲ್ಲಿ ಹೆಚ್ಚಾಗಿದ್ದು ಹೋರಾಟವೋ ಕಾದಾಟವೋ?' ಎಂಬ ಶೀರ್ಷಿಕೆಯಡಿ ಸೋಷಿಯಲ್ ಮೀಡಿಯಾದಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ.
ನೀರಿನ ಆಟ ಆಡುತ್ತಾ ಹೋರಾಟವನ್ನೇ ಶುರು ಮಾಡಿದ್ದಾರೆ ಮನೆಯ ಸದಸ್ಯರು. ತುಕಾಲಿ ಸಂತೋಷ್ ಅವರನ್ನು ಸ್ನೇಹಿತ್ ತಮ್ಮ ಗುರಾಣಿಯಿಂದ ನೂಕಿದ್ದಾರೆ. ವಿನಯ್ ಅವರಂತೂ ಸಂತೋಷ್ ಅವರನ್ನು ಬೀಳಿಸಿಯೇ ಬಿಟ್ಟಿದ್ದಾರೆ. ಮತ್ತೊಂದು ದೃಶ್ಯದಲ್ಲಿ ಸ್ನೇಹಿತ್ ಮತ್ತು ತುಕಾಲಿ ಪರಸ್ಪರ ಡಿಕ್ಕಿ ಹೊಡೆದು ಬಿದ್ದೇ ಬಿಟ್ಟಿದ್ದಾರೆ. ಕೊನೆಗೆ ತುಕಾಲಿ ಅವರು, ಬೇಕಂತಲೇ ಮಾಡ್ತಿದ್ದಾರೆ. ನಾನು ಆಟ ಆಡಲ್ಲ ಎಂದು ಹೊರಟುಹೋಗಿದ್ದಾರೆ. ವಿನಯ್, ಸತ್ಯವಾಗ್ಲೂ ಬೇಕಂತ ಮಾಡಿಲ್ಲ ಎಂದರೂ ತುಕಾಲಿ ಕೇಳುವ ಮನಸ್ಥಿತಿಯಲ್ಲಿರಲಿಲ್ಲ. ವಿನಯ್ ಮತ್ತು ತುಕಾಲಿ ನಡುವೆ ಹೊತ್ತಿಕೊಂಡ ಕಿಡಿ ಏರುತ್ತಲೇ ಹೋಗಿದೆ.