ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದೆ. ಈ ಸೀಸನ್ ಆರಂಭವಾದಾಗಿನಿಂದಲೂ ಸಂಗೀತಾ - ಕಾರ್ತಿಕ್ - ತನಿಷಾ ಬಹಳ ಆತ್ಮೀಯರಾಗಿ ಗುರುತಿಸಿಕೊಂಡಿದ್ದಾರೆ. ಸಂಕಷ್ಟದ ಸಂದರ್ಭಗಳಲ್ಲಿ ಮೂವರೂ ಒಬ್ಬರಿಗೊಬ್ಬರು ಹೆಗಲು ಕೊಟ್ಟು ನಿಂತಿದ್ದಾರೆ. ಪ್ರತಿಸ್ಪರ್ಧಿಗಳನ್ನು ಧೈರ್ಯವಾಗಿ, ಒಟ್ಟಾಗಿ ಎದುರಿಸಿದ್ದಾರೆ. ಸಂಗೀತಾ ಕಳಪೆ ಪಟ್ಟ ಹೊತ್ತು ಬಿಗ್ ಬಾಸ್ ಮನೆಯಲ್ಲಿರುವ ಜೈಲಿಗೆ ಹೋದ ಸಂದರ್ಭದಲ್ಲಂತೂ ಕಾರ್ತಿಕ್, 'ನಾವು ಮೂವರೂ ಈ ಮನೆಗೆ ಬಂದ ದಿನದಿಂದಲೂ ಒಟ್ಟಿಗಿದ್ದೇವೆ. ಮುಂದೆಯೂ ಒಟ್ಟಿಗಿರುತ್ತೇವೆ. ಫ್ರೆಂಡ್‌ಗೆ ತೊಂದರೆಯಾದಾಗ ಅವರೊಟ್ಟಿಗಿರುವುದು, ಪ್ರೋತ್ಸಾಹಿಸುವುದು ನನ್ನ ಕರ್ತವ್ಯ. ಅವರ ಜೊತೆ ನಾನು ನಿಂತೇ ನಿಲ್ಲುತ್ತೇನೆ' ಎಂದು ಒತ್ತಿ ಹೇಳಿದ್ದರು. ಆದ್ರೀಗ ಮೂವರ ಸ್ನೇಹದಲ್ಲಿ ಕೊಂಚ ಬಿರುಕು ಮೂಡಿದಂತೆ ತೋರುತ್ತಿದೆ. ಇದರ ಸೂಚನೆ ಹೊಸದಾಗಿ ರಿವೀಲ್ ಆಗಿರುವ ಪ್ರೋಮೋದಲ್ಲಿ ಸಿಕ್ಕಿದೆ.
ನಿನ್ನೆಯ ಎಲಿಮಿನೇಷನ್‌ನ ಲೂಡೋ ಟಾಸ್ಕ್‌ನಲ್ಲಿ ಒಂದು ಹಂತದಲ್ಲಿ ಕಾರ್ತಿಕ್ ಮತ್ತು ತನಿಷಾ ಅವರಿಗೆ ಎದುರಾಳಿ ತಂಡದ ಒಬ್ಬರನ್ನು ಸೇವ್ ಮಾಡುವ ಅವಕಾಶ ಸಿಕ್ಕಿತ್ತು. ಇಬ್ಬರೂ ವರ್ತೂರು ಸಂತೋಷ್ ಜೊತೆಗೂಡಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಎದುರಾಳಿ ತಂಡದಲ್ಲಿದ್ದ ಸಂಗೀತಾ ಅವರು ತಮ್ಮನ್ನೇ ಸೇವ್ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆದದ್ದೇ ಬೇರೆ. ತನಿಷಾ ಅವರು, ನಾವು ಎದುರಾಳಿ ತಂಡದಿಂದ ಸಿರಿ ಅವರನ್ನು ಸೇವ್ ಮಾಡುತ್ತೇವೆ ಎಂದು ಘೋಷಿಸಿದರು. ಅದುವರೆಗೆ ನಗುನಗುತ್ತಾ, ಕುಣಿದಾಡುತ್ತಿದ್ದ ಸಂಗೀತಾ ಅವರ ಮುಖದಲ್ಲಿ ಒಮ್ಮೆಲೆ ಅಸಮಾಧಾನ ಕಾಣಿಸಿಕೊಂಡಿತು.
ಮೇಲ್ನೋಟಕ್ಕೆ ಆ ಕ್ಷಣದಲ್ಲಿ ವಿಷಯ ಮಗಿದು ಹೋದಂತೆ ಕಂಡರೂ, ಸಂಗೀತಾ ಮನಸ್ಸಲ್ಲಿ ಹಲವು ವಿಷಯಗಳು ಬೆಳಯುತ್ತಲೇ ಇದೆ ಎಂಬಂತೆ ತೋರುತ್ತಿದೆ. ಇಂದಿನ ಪ್ರೋಮೋದಲ್ಲಿ ಸಂಗೀತಾ ಮತ್ತು ತನಿಷಾ ಪರಸ್ಪರ ವಾದ ಮಾಡಿಕೊಳ್ಳುತ್ತಿದ್ದಾರೆ. ಕೊನೆಯಲ್ಲಿ ಸಂಗೀತಾ, 'ಕಿರುಚಬೇಡಿ ತನಿಷಾ' ಎಂದು ಗಟ್ಟಿಯಾಗಿ ಹೇಳಿರೋದು ಕಂಡುಬರುತ್ತದೆ. ಒಂದೆಡೆ ಸಂಗೀತಾ ಕಾರ್ತಿಕ್ ಬಳಿ, 'ನಿಮ್ಮ ಕೈಯಲ್ಲಿ ನನ್ನನ್ನು ಸೇವ್ ಮಾಡುವ ಚಾನ್ಸ್ ಇತ್ತು' ಎಂದು ಹೇಳಿದ್ದಾರೆ. ಇನ್ನೊಂದೆಡೆಗೆ ತನಿಷಾ ಬಳಿ, 'ನೀವು ನನ್ನನ್ನ ಸೇವ್ ಮಾಡ್ಲಿಲ್ಲ' ಎಂದೂ ಹೇಳಿದ್ದಾರೆ.