ಈ ವಾರ ಬಿಗ್ ಬಾಸ್ ಮನೆಯಲ್ಲಿ ವ್ಯವಹಾರದ ವಾತಾವರಣ ಸೃಷ್ಟಿಯಾಗಿದೆ. ನಿನ್ನೆ ಮೊನ್ನೆ ಬಿಡ್ಡಿಂಗ್ ಭರಾಟೆ ಜೋರಾಗಿತ್ತು. ಖರೀದಿ - ಮಾರಾಟದ ವ್ಯವಹಾರವೀಗ ಹೊಸದೊಂದು ಮಜಲಿಗೆ ತಲುಪಿದೆ. ಅದೇನು ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಹಿರಂಗಗೊಂಡಿದೆ. 'ದಿನಸಿಗಾಗಿ ಖರ್ಚು ಮಾಡಲೊಪ್ಪದ ತನಿಷಾ ಮೇಲೆ ಗರಂ ಆದ್ರಾ ನಮ್ರತಾ?' ಶೀರ್ಷಿಕೆಯಡಿ ಸೋಷಿಯಲ್ ಮೀಡಿಯಾಗಳಲ್ಲಿ ಕಲರ್ಸ್ ಕನ್ನಡ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದ್ದು, ಪ್ರೇಕ್ಷಕರು ಸಂಪೂರ್ಣ ಸಂಚಿಕೆ ವೀಕ್ಷಿಸುವ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟು ದಿನ ಸ್ಪರ್ಧಿಗಳನ್ನು ಖರೀದಿಸುವ ಟಾಸ್ಕ್‌ಗಳ ಮೂಲಕ ಹಣ ಸಂಪಾದಿಸುವ ಚಟುವಟಿಕೆಯಲ್ಲಿ ಮುಳುಗಿಹೋಗಿದ್ದ ಸದಸ್ಯರಿಗೆ ಬಿಗ್ ಬಾಸ್ ಹೊಸದೊಂದು ಅವಕಾಶ ನೀಡಿದ್ದಾರೆ. ಅದು ಲಕ್ಷುರಿ ಖರೀದಿಸುವ ಅವಕಾಶ. ಆದರೆ ಮನೆಯ ಸದಸ್ಯರು ಅವರ ಬಳಿ ಇರುವ ಹಣದಿಂದ ದಿನಸಿಗಳನ್ನು ಖರೀದಿಸಬೇಕು.
ಯಾರ ಬಳಿ ಇರುವ ಹಣವನ್ನು ದಿನಸಿಗೆ ವ್ಯಯಿಸಬೇಕು ಎಂಬ ವಿಚಾರವಾಗಿ ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ನಾಯಕರ ಬಳಿ ಜಾಸ್ತಿ ಹಣವಿದೆ ಎಂದು ವಿನಯ್ ಹೇಳಿದ್ದಾರೆ. ಸಂಗೀತಾ, ಅರ್ಧ ಅರ್ಧ ಶೇರ್ ಮಾಡಿಕೊಳ್ಳೋಣ ಎಂದೂ ಹೇಳಿದ್ದಾರೆ. ಆದರೆ ಮತ್ತೋರ್ವ ಕ್ಯಾಪ್ಟನ್ ತನಿಷಾ ಅದಕ್ಕೆ ಒಪ್ಪಿಲ್ಲ. ದಿನಸಿ ಬೇಕಾಗಿರುವುದು ಮನೆಯ ಎಲ್ಲಾ ಸದಸ್ಯರಿಗೆ. ಹಾಗಾಗಿ, ಎಲ್ಲರೂ ಹಣ ವ್ಯಯಿಸಬೇಕು ಎಂಬುದು ಅವರ ವಾದ. ಈ ಹೊತ್ತಿನಲ್ಲಿ ಮಧ್ಯಪ್ರವೇಶಿಸಿದ ನಮ್ರತಾ ವಿರುದ್ಧವೂ ತನಿಷಾ ಹರಿಹಾಯ್ದಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ.