ಕರ್ನಾಟಕ

karnataka

ETV Bharat / entertainment

ಸಿನಿ ಜಗತ್ತಿನಿಂದ ರಾಜಕೀಯಕ್ಕೆ ಬಂದ ಕಲಾವಿದರು: ನೆಲೆಯೂರಿದವರೆಷ್ಟು, ವಾಪಸಾದವರೆಷ್ಟು? - ಶ್ರುತಿ

ಕನ್ನಡ ಚಿತ್ರರಂಗದಿಂದ ಸಾಕಷ್ಟು ನಟರು ರಾಜಕಾರಣಕ್ಕೆ ಬಂದು ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಹಾಗಾದರೆ ಸ್ಯಾಂಡಲ್​​ವುಡ್​ನಲ್ಲಿ ಗುರುತಿಸಿಕೊಂಡ ಯಾರೆಲ್ಲಾ ರಾಜಕೀಯದಲ್ಲೂ ಕಮಾಲ್ ಮಾಡಿದ್ದಾರೆ ಅಂತಾ ಹೇಳ್ತೀವಿ ನೋಡಿ.

kannada actors in political field
ರಾಜಕೀಯ ರಣರಂಗಕ್ಕೆ ಧುಮುಕಿದ ಸೆಲೆಬ್ರಿಟಿಗಳಿವರು

By

Published : Apr 14, 2023, 1:21 PM IST

ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಪ್ರತಿಭೆ ಜೊತೆಗೆ ಅದೃಷ್ಟ ಇದ್ದರೆ ದಿನ ಬೆಳಗಾಗುವುದರೊಳಗೆ ಸ್ಟಾರ್ ಪಟ್ಟ ಬಂದು ಬಿಡುತ್ತೆ. ಈ ಸ್ಟಾರ್ ಡಮ್ ಇಟ್ಟುಕೊಂಡು ಚಿತ್ರರಂಗದಲ್ಲಿ ಮುಂದುವರಿದವರ ಸಂಖ್ಯೆ ಸುಮಾರು. ಅಲ್ಲದೇ ರಾಜಕೀಯ ಅಖಾಡಕ್ಕೆ ಧುಮುಕಿದವರು ಹಲವರು. ಅವರಲ್ಲಿ ಕೆಲವರು ಯಶಸ್ವಿ ರಾಜಕಾರಣಿಗಳಾಗಿದ್ದಾರೆ. ಮತ್ತೆ ಕೆಲವರು ಸಿನಿಮಾಗೆ ವಾಪಸ್​ ಆಗಿದ್ದಾರೆ. ಒಂದಿಷ್ಟು ಮಂದಿನ ಎರಡೂ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ.

ಅನಂತ್ ನಾಗ್: ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಅಭಿನಯದ ಮೂಲಕ ಗುರುತಿಸಿಕೊಂಡಿರುವ ಹಿರಿಯ ನಟ ಅನಂತ್ ನಾಗ್. ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸೈ ಎನ್ನಿಸಿಕೊಂಡ ಅನಂತ್ ನಾಗ್ ಕೂಡ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. 1983ರಲ್ಲಿ ಜನತಾ ಪಾರ್ಟಿ ಪಕ್ಷದ ಪರವಾಗಿ ಸ್ಟಾರ್ ಪ್ರಚಾರ ಮಾಡಿದ್ರು. ಇಲ್ಲಿಂದ ಅನಂತ್ ನಾಗ್ ಸಿನಿಮಾ ಜೊತೆಗೆ ರಾಜಕೀಯ ಒಡನಾಟ ಹೊಂದಿದ್ರು. 1994ರಲ್ಲಿ ಮಲ್ಲೇಶ್ವರಂ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಜೆ.ಹೆಚ್​​ ಪಟೇಲ್ ಮಂತ್ರಿಮಂಡಲದಲ್ಲಿ ಸಚಿವರಾಗಿ ಗಮನ ಸೆಳೆದಿದ್ದರು.

ದಿ. ಅಂಬರೀಶ್: ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ದಿ. ಅಂಬರೀಶ್ ಸಹ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಮಂಡ್ಯದ ಗಂಡು ಎಂದೇ ಖ್ಯಾತಿ ಪಡೆದಿದ್ದ ಅಂಬರೀಶ್​, ತಮ್ಮ ರಾಜಕೀಯ ಬದುಕು ಆರಂಭಿಸಿದ್ದು ಜನತಾದಳ ಮೂಲಕ. 1998ರಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಚುನಾಯಿತರಾದ ಅವರು, ಬಳಿಕ ಕಾಂಗ್ರೆಸ್‌ನಿಂದ ಇದೇ ಕ್ಷೇತ್ರದಲ್ಲಿ ಗೆದ್ದರು. 2004ರಲ್ಲಿ ಮರು ಆಯ್ಕೆಯಾಗಿದ್ದರು. 2014ರಲ್ಲಿ ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ವಸತಿ ಸಚಿವರಾಗಿದ್ರು. ಇನ್ನುಅಂಬರೀಶ್ ಪತ್ನಿ, ನಟಿ ಸುಮಲತಾ ಅಂಬರೀಶ್​ ಸದ್ಯ ಲೋಕಸಭಾ ಸದಸ್ಯೆ (ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದರು).

ಜಗ್ಗೇಶ್: ಕನ್ನಡ ಚಿತ್ರರಂಗದಲ್ಲಿ ನವರಸನಾಯಕನಾಗಿ ಗಮನ ಸೆಳೆದ ನಟ ಜಗ್ಗೇಶ್. ಹಲವು ವರ್ಷಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಜಗ್ಗೇಶ್, ಒಂದು ಬಾರಿ ತುರುವೇಕೆರೆಯಿಂದ ವಿಜೇತರಾಗಿ ಶಾಸಕರಾಗಿದ್ದರು. ನಂತರ ವಿಧಾನ ಪರಿಷತ್‌ ಸದಸ್ಯರಾಗಿದ್ದರು. 2019ರಲ್ಲಿ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿಯಾಗಿ ನಿಂತಿದ್ದ ಜಗ್ಗೇಶ್ ಸೋಲು ಕಂಡಿದ್ರು. ಸದ್ಯ ಜಗ್ಗೇಶ್ ರಾಜ್ಯಸಭೆ ಸದ್ಯಸರಾಗಿದ್ದಾರೆ.

ಉಪೇಂದ್ರ: ಕನ್ನಡ ಚಿತ್ರರಂಗದ ಬುದ್ಧಿವಂತ ಖ್ಯಾತಿಯ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ. ರಾಜಕೀಯ ಬಗ್ಗೆ ಸೂಪರ್ ಸಿನಿಮಾ ಮೂಲಕ ಸಿಲ್ವರ್ ಸ್ಕ್ರೀನ್ ಮೇಲೆ ತಮ್ಮ ಐಡಿಯಾಗಳನ್ನು ಅನಾವರಣಗೊಳಿಸಿದ್ದರು. 2018ರಲ್ಲಿ ಉತ್ತಮ ಪ್ರಜಾಕೀಯ ಎಂಬ ಪಕ್ಷ ಕಟ್ಟುವ ಮೂಲಕ ರಾಜಕೀಯ ಅಖಾಡಕ್ಕೆ ಧುಮುಕಿದ್ರು. ಈಗ ಪ್ರಜಾಕೀಯ ಪಕ್ಷವನ್ನು ಸಂಘಟಿಸುವಲ್ಲಿ ನಿರತರಾಗಿದ್ದಾರೆ. ಪ್ರಜಾಕೀಯ ಪಕ್ಷದಿಂದ ರಾಜಕೀಯದಲ್ಲಿ ಬದಲಾವಣೆ ತರಬೇಕು ಅಂತಾ ಉಪೇಂದ್ರ ಸಾಕಷ್ಟು ಗ್ರೌಂಡ್ ವರ್ಕ್ ಮಾಡ್ತಾ ಇದ್ದಾರೆ.

ಬಿ.ಸಿ ಪಾಟೀಲ್: ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ನಂತರ ಸಿನಿಮಾಗೆ ಪದಾರ್ಪಣೆ ಮಾಡಿದ ನಟ ಬಿ.ಸಿ ಪಾಟೀಲ್. ನಿಷ್ಕರ್ಷ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಬಿ.ಸಿ ಪಾಟೀಲ್, ಇದೇ ಸ್ಟಾರ್ ಡಮ್ ಬಳಸಿ ರಾಜಕೀಯಕ್ಕೆ ಬರ್ತಾರೆಂದು ಯಾರೂ ಊಹಿಸಿರಕ್ಕಿರಲಿಲ್ಲ. ಜೆಡಿಎಸ್ ಪಕ್ಷದಿಂದ ರಾಜಕೀಯ ಜರ್ನಿ ಶುರು ಮಾಡಿದ ಬಿ.ಸಿ ಪಾಟೀಲ್ ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ಮಂತ್ರಿಮಂಡಲದಲ್ಲಿ ಕೃಷಿ ಸಚಿವರಾಗಿದ್ದಾರೆ.

ಸಿ.ಪಿ ಯೋಗಿಶ್ವರ್: ಸ್ಯಾಂಡಲ್​​ವುಡ್​​ಗೆ ಸಹ ಕಲಾವಿದನಾಗಿ ಬಂದು, ನಂತ್ರ ಹೀರೋ ಆದವರಲ್ಲಿ ಸಿ.ಪಿ ಯೋಗಿಶ್ವರ್ ಕೂಡ ಒಬ್ಬರು. ಸೈನಿಕ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಟನಾದ ಸಿ.ಪಿ ಯೋಗಿಶ್ವರ್ ಕೂಡ 1999ರಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಜರ್ನಿ ಶುರು ಮಾಡಿದರು. ಸದ್ಯ ಬಿಜೆಪಿ ಪಕ್ಷದಲ್ಲಿ ಸಿ.ಪಿ ಯೋಗೀಶ್ವರ್ ಗುರುತಿಸಿಕೊಂಡಿದ್ದಾರೆ.

ಕುಮಾರ್ ಬಂಗಾರಪ್ಪ: ಶರವೇಗದ ಸರದಾರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದರ್ಪಾಣೆ ಮಾಡಿದ ನಟ ಕುಮಾರ್ ಬಂಗಾರಪ್ಪ. 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆಯ ನಟನಾಗಿದ್ದರು. 1996ರಲ್ಲಿ ರಾಜಕೀಯ ಪ್ರವೇಶ ಮಾಡಿದರು. ಇವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಹಿರಿಯ ಪುತ್ರ. ಇದೀಗ ಶಿವಮೊಗ್ಗದ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ.

ಶಶಿಕುಮಾರ್: ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಹೊಂದಿದ್ದ ನಟ ಶಶಿಕುಮಾರ್. ತನ್ನ ಸ್ಟಾರ್ ಡಮ್​ನಿಂದ 1999ರಲ್ಲಿ ಶಶಿಕುಮಾರ್ ಲೋಕಸಭೆಗೆ ಆಯ್ಕೆಯಾಗಿದ್ದರು. ಸದ್ಯ ಶಶಿಕುಮಾರ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.

ರಮ್ಯಾ, ಉಮಾಶ್ರೀ, ಜಯಮಾಲಾ: ಸ್ಯಾಂಡಲ್​ವುಡ್​​ನಲ್ಲಿ ಮೋಹಕ ತಾರೆಯಾಗಿ ಕನ್ನಡಿಗರ ಮನಗೆದ್ದ ನಟಿ ರಮ್ಯಾ. ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡ ರಮ್ಯಾ 2012ರಲ್ಲಿ ಕಾಂಗ್ರೆಸ್​​ ಪಕ್ಷಕ್ಕೆ ಸೇರುತ್ತಾರೆ. 2013ರಲ್ಲಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಎಂಪಿ ಆಗಿ ಮಂಡ್ಯ ಜನರ ಕೆಲಸ ಮಾಡಿ ಗಮನ ಸೆಳೆಯುತ್ತಾರೆ. ಸದ್ಯ ಕಾಂಗ್ರೆಸ್​​ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ನಟಿ ಉಮಾಶ್ರೀ ಕಾಂಗ್ರೆಸ್​​ ಪಕ್ಷದಲ್ಲಿ ಗುರುತಿಸಿಕೊಂಡು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿ ಪದವಿ ನಿಭಾಯಿಸಿದರು. ಹಾಗೇ ಜಯಮಾಲಾ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಹಿಂದೆ ಪರಿಷತ್ ಸದಸ್ಯೆಯಾಗಿದ್ದ ಜಯಮಾಲಾ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸಚಿವೆ ಆಗಿದ್ದರು.

ಪ್ರಕಾಶ್ ರಾಜ್​​: ಕನ್ನಡ ಚಿತ್ರರಂಗ ಅಲ್ಲದೇ ಬಹುಭಾಷೆಯಲ್ಲಿ ಸಕ್ಸಸ್ ಕಂಡಿರುವ ಪ್ರಕಾಶ್ ರಾಜ್​​ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ರಾಜಕೀಯದಲ್ಲಿ ಸೋಲನ್ನು ಅನುಭವಿಸಿದರು. ಆದ್ರೆ ಸಾಮಾಜಿಕ ಜಾಲತಾಣ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ.

ಮುಖ್ಯಮಂತ್ರಿ ಚಂದ್ರು: ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಸದ್ಯ ಆಮ್ ಆದ್ಮಿ ಪಕ್ಷದಲ್ಲಿದ್ದಾರೆ.

ಸಾಯಿಕುಮಾರ್: ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಬಿಜೆಪಿ ಪಕ್ಷದ ಮೂಲಕ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ.

ಸಾಧುಕೋಕಿಲ, ನಾರಾಯಣ : ನಟನೆ, ನಿರ್ದೇಶನ ಹಾಗೂ ಸಂಗೀತದ ಮುಖಾಂತರ ತನ್ನದೇ ಬೇಡಿಕೆ ಹೊಂದಿರುವ ಸಾಧುಕೋಕಿಲ ಅವರು ಕಾಂಗ್ರೆಸ್ (ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷ)​​ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ನಟ, ನಿರ್ದೇಶಕ ಎಸ್​ ನಾರಾಯಣ ಅವರು ಸದ್ಯ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ.

ರಾಜಕೀಯದಲ್ಲಿ ಗುರುತಿಸಿಕೊಂಡಿರುವ ನಟಿಯರು:ಇನ್ನೂ ಬಿಜೆಪಿಯಲ್ಲಿ ತಾರಾ ಅನುರಾಧ (ವಿಧಾನ ಪರಿಷತ್​ ಸದಸ್ಯೆ), ನಟಿ ಶ್ರುತಿ, ಮಾಳವಿಕ ಅವಿನಾಶ್, ಗಾಯಕಿ ಬಿ ಜಯಶ್ರೀ(ರಾಜ್ಯ ಸಭೆ ಸದಸ್ಯೆ ಆಗಿದ್ದರು) ಗುರುತಿಸಿಕೊಂಡಿದ್ದಾರೆ. ಸೂಪರ್​ ಹಿಟ್​ ನಿಸಿಮಾ ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಬಿಎಸ್​ಆರ್​ ಕಾಂಗ್ರೆಸ್​ನಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಸದ್ಯ ಸಿನಿಮಾ ಮತ್ತು ರಾಜಕೀಯದಿಂದ ದೂರವಿದ್ದಾರೆ.

ಇದನ್ನೂ ಓದಿ:ಬಣ್ಣದ ಜಗತ್ತಿನಿಂದ ರಾಜಕೀಯದ ರಣರಂಗಕ್ಕೆ ಧುಮುಕಿದ ಸೆಲೆಬ್ರಿಟಿಗಳಿವರು: ನೆಲೆ ಕಂಡವರೆಷ್ಟು?

ABOUT THE AUTHOR

...view details