ಸ್ಯಾಂಡಲ್ವುಡ್ನ ಅನೇಕ ನಟರು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ. ಆ ಸಾಲಿನಲ್ಲಿ ಬೆಂಕಿ ಕಂಗಳ ನಟ ಎಂದೇ ಖ್ಯಾತರಾಗಿರುವ ಡ್ಯಾನಿ ಕುಟ್ಟಪ್ಪ ಕೂಡ ಒಬ್ಬರು. ಈಗಾಗಲೇ ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿರುವ ಇವರು ಇದೀಗ ಮತ್ತೆ ತೆಲುಗಿನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಟಾಲಿವುಡ್ ಮಾಸ್ ನಿರ್ದೇಶಕ ಬೋಯಾಪಾಟಿ ಶ್ರೀನು ಆ್ಯಕ್ಷನ್ ಕಟ್ ಹೇಳಿರುವ, ರಾಮ್ ಪೋತಿನೇನಿ ಅಭಿನಯದ 'ಸ್ಕಂದ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಡ್ಯಾನಿ ಕುಟ್ಟಪ್ಪ ಅವರಿಗೆ ಟಾಲಿವುಡ್ ಹೊಸತೇನಲ್ಲ. 'ಬಾಹುಬಲಿ' ಚಿತ್ರದ ಮೂಲಕ ತೆಲುಗು ರಂಗಕ್ಕೆ ಕಾಲಿಟ್ಟ ಅವರು ನಂತರ 'ಗದ್ದಲಕೊಂಡ ಗಣೇಶ್' ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ 'ಸ್ಕಂದ' ಸಿನಿಮಾದಲ್ಲಿ ಅತೀ ಮುಖ್ಯವಾದ ನೆಗೆಟಿವ್ ರೋಲ್ ಪ್ಲೇ ಮಾಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಸ್ಕಂದ' ಟ್ರೇಲರ್ನಲ್ಲಿ ಡ್ಯಾನಿ ಕುಟ್ಟಪ್ಪ ಅವರ ಪಾತ್ರದ ಪರಿಚಯವೂ ಇದೆ.
ಇದಲ್ಲದೇ, ಇತ್ತೀಚೆಗೆ ನಡೆದ 'ಸ್ಕಂದ' ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಬೋಯಾಪಾಟಿ ಶ್ರೀನು ಅವರು ಡ್ಯಾನಿ ಕುಟ್ಟಪ್ಪ ಅವರನ್ನು ಆಂಧ್ರದ ಜನತೆಗೆ ಪರಿಚಯಿಸಿಕೊಡುವ ಜೊತೆಗೆ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಡ್ಯಾನಿ ಬಹಳ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಸಾವಿರಾರು ಜನರ ಮುಂದೆ ಹೊಗಳಿದ್ದಾರೆ. ತೆಲುಗಿನಲ್ಲಿ ಅಖಂಡ, ಲೆಜೆಂಡ್, ಸಿಂಹ ಮುಂತಾದ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನು ಅವರಿಂದ ಮೆಚ್ಚುಗೆಯ ಮಾತು ಕೇಳುವುದು ಅಷ್ಟು ಸುಲಭವಲ್ಲ. ಅಂತಹವರು ಡ್ಯಾನಿ ಬಗ್ಗೆ ಮಾತನಾಡಿರುವುದು ನಿಜಕ್ಕೂ ಖುಷಿಯ ವಿಚಾರ.