ಅದ್ಭುತ ಸಿನಿಮಾ ಮತ್ತು ಬೋಲ್ಡ್ ಹೇಳಿಕೆಗಳಿಂದ ಹೆಸರು ಮಾಡುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅಸ್ಸಾಂ ರಾಜಧಾನಿ ಗುಹಾಹಟಿಯಲ್ಲಿರುವ ಶಕ್ತಿಪೀಠ ಕಾಮಾಖ್ಯ ದೇವಿ ದೇವಸ್ಥಾನಕ್ಕೆ (Kamakhya Temple) ಭೇಟಿ ಕೊಟ್ಟು ತಾಯಿಯ ದರ್ಶನ ಪಡೆದರು. ಆಗಾಗ್ಗೆ ದೇವಸ್ಥಾನಗಳಿಗೆ ಭೇಟಿ ಕೊಡುವ ನಟಿ ಕಂಗನಾ ಇಂದು ಸೋಷಿಯಲ್ ಮೀಡಿಯಾದಲ್ಲಿ ಹೊಸ ವಿಡಿಯೋ ಹಂಚಿಕೊಂಡು, ಕಾಮಾಖ್ಯ ದೇವಿ ಶಕ್ತಿ ಬಗ್ಗೆ ಬರೆದುಕೊಂಡಿದ್ದಾರೆ.
ಶಕ್ತಿಯ ಒಂದು ರೂಪ...: ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಶೇರ್ ಮಾಡಿರುವ ಕಂಗನಾ ರಣಾವತ್, "ಇಂದು ಕಾಮಾಖ್ಯ ಮಾತೆಯ ದರ್ಶನ ಪಡೆದೆ. ಇಲ್ಲಿ ಮಾತೆಯ ವಿರಾಟ ರೂಪವಿದೆ. ಇಲ್ಲಿ ದೇವಿಗೆ ಮಾಂಸ ಮತ್ತು ಬಲಿ ಕೊಡಲಾಗುತ್ತದೆ. ಈ ಪವಿತ್ರ ಸ್ಥಾನ ಶಕ್ತಿಯ ಒಂದು ರೂಪ. ಇಲ್ಲಿ ಶಕ್ತಿಯ ಅದ್ಭುತ ಸಂಚಾರವಿದೆ. ನೀವು ಗುಹಾಹಟಿಗೆ ಬಂದ್ರೆ ದೇವಿಯ ದರ್ಶನ ಪಡೆಯಿರಿ" ಎಂದು ಹೇಳಿದ್ದಾರೆ.
ನೆಟ್ಟಿಗರು ಹೀಗಂದ್ರು:ಕಂಗನಾ ಹಂಚಿಕೊಂಡಿರುವ ವಿಡಿಯೋಗೆ ಅಭಿಮಾನಿಗಳು, ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, 'ಸನಾತನಿ ಕ್ವೀನ್' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವರು, 'ಜೈ ಮಾತಾ, ಮಾ ಕಾಮಾಖ್ಯ ನಿಮಗೆ ಆಶೀರ್ವಾದ ಮಾಡಲಿ' ಎಂದು ಬರೆದಿದ್ದಾರೆ.
ಪ್ರೀತಿ ಜಿಂಟಾ ಕೂಡ ಭೇಟಿ ಕೊಟ್ಟಿದ್ದರು: ಏಪ್ರಿಲ್ನಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ಕೂಡ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ದೇವಸ್ಥಾನದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ದೇವಾಲಯ ಪ್ರವೇಶಿಸುತ್ತಿದ್ದಂತೆ ಶಾಂತಿ ಮತ್ತು ನೆಮ್ಮದಿಯ ಅನುಭವವಾಯ್ತು" ಎಂದು ಬರೆದುಕೊಂಡಿದ್ದರು.