ಸಿನಿಮಾ ಜೊತೆ ಜೊತೆಗೆ ಸದಾ ಒಂದಿಲ್ಲೊಂದು ಹೇಳಿಕೆ ಮೂಲಕ ಹೆಚ್ಚು ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇದೀಗ ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರನ್ನು ಗುರಿಯಾಗಿಸಿಕೊಂಡು ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಮಂಗಳವಾರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ನಿರ್ಮಾಪಕ ಕರಣ್ ಜೋಹರ್ ವಿರುದ್ಧ ಆರೋಪ ಮಾಡಿದ್ದು, ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು "ಬ್ಯಾನ್ ಮಾಡಲಾಗಿದೆ" ಎಂದು ಹೇಳಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ, ಹಿಂದಿ ಚಲನಚಿತ್ರೋದ್ಯಮದಿಂದ ವಿರಾಮ ತೆಗೆದುಕೊಂಡ ಬಗ್ಗೆ ಕಾರಣ ಬಹಿರಂಗಪಡಿಸಿದ್ದರು. ನನ್ನನ್ನು ಮೂಲೆಗೆ ತಳ್ಳಲು ಯತ್ನಿಸಿದ್ದರು, ಸಿನಿಮಾ ರಂಗದ ರಾಜಕೀಯ ಹಿನ್ನೆಲೆ ಬೇಸತ್ತು ಕೊಂಚ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾಗಿ ತಿಳಿಸಿದ್ದರು. ಇದಾದ ಬಳಿಕ ಕಂಗನಾ ಅವರು ಕರಣ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಂಗನಾ ಟ್ವಿಟ್ಟರ್ನಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಸುದ್ದಿಯೊಂದನ್ನು ಹಂಚಿಕೊಂಡು, "ಒಂದು ಮೂಲೆಗೆ ತಳ್ಳಲಾಯಿತು, ರಾಜಕೀಯದಿಂದ ಬೇಸತ್ತು" ಎಂದು ಬರೆದುಕೊಂಡಿದ್ದಾರೆ. "ಬಾಲಿವುಡ್ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳುವುದು ಇದನ್ನೇ, ಜನರು ಗುಂಪುಗೂಡಿದರು, ಅವರನ್ನು ಬೆದರಿಸಿದರು, ಚಿತ್ರರಂಗದಿಂದ ಹೊರಹಾಕಿದರು''. ಭಾರತವನ್ನು ತೊರೆಯುವಂತೆ ಮಾಡಲಾಯಿತು. ಕರಣ್ ಜೋಹರ್ ಅವರು ಪ್ರಿಯಾಂಕಾರನ್ನು ನಿಷೇಧಿಸಿದ್ದರು ಎಂದು ಎಲ್ಲರಿಗೂ ತಿಳಿದಿದೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ. ಪ್ರಿಯಾಂಕಾ ಅವರಿಗೆ ಕರಣ್ "ಕಿರುಕುಳ" ನೀಡಿದ್ದಾರೆ. ಹಾಗಾಗಿ ಅವರು ದೇಶ ತೊರೆಯಲು ಕಾರಣವಾಯಿತು ಎಂದು ಸಹ ಬಾಲಿವುಡ್ ಕ್ವೀನ್ ಕಂಗನಾ ಆರೋಪಿಸಿದ್ದಾರೆ.