ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿ ಲೋಕದಲ್ಲಿ ಸಾಕಷ್ಟು ಸಾಧನೆ ಮಾಡಿ ಫೇಮಸ್ ಆಗಿದ್ದಾರೆ. ವೈಯಕ್ತಿಕ ಹಾಗೂ ವೃತ್ತಿ ಜೀವನ ಎರಡು ವಿಚಾರವಾಗಿಯೂ ಅವರು ಸುದ್ದಿಯಲ್ಲಿರುತ್ತಾರೆ. ಇದೀಗ ಐತಿಹಾಸಿಕ ಕ್ಷಣವೊಂದಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ. ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಲವಕುಶ ರಾಮ್ಲೀಲಾ ಸಮಾರಂಭದಲ್ಲಿ ನಟಿ ರಾವಣ ದಹನ ಮಾಡಲಿದ್ದಾರೆ. 50 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಓರ್ವ ಮಹಿಳೆ ರಾವಣ ದಹನ ಮಾಡಲಿದ್ದಾರೆ. ಈ ವಿಚಾರವನ್ನು ಲವಕುಶ ರಾಮ್ಲೀಲಾ ಸಮಿತಿಯ ಅಧ್ಯಕ್ಷ ಅರ್ಜುನ್ ಸಿಂಗ್ ತಿಳಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ಸಂಸತ್ತು ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯಿಂದ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅರ್ಜುನ್ ಸಿಂಗ್ ಬಹಿರಂಗಪಡಿಸಿದ್ದಾರೆ. "ಇಷ್ಟು ವರ್ಷ ನಮ್ಮ ಸಮಾರಂಭದಲ್ಲಿ ಚಲನಚಿತ್ರ ತಾರೆಯರು ಅಥವಾ ರಾಜಕಾರಣಿಗಳು ರಾವಣ ದಹನವನ್ನು ಮಾಡುತ್ತಿದ್ದರು. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ನಟ ಅಜಯ್ ದೇವಗನ್, ಜಾನ್ ಅಬ್ರಾಹಂ ಅವರಂತಹ ಗಣ್ಯರು ಈ ಕೆಲಸ ಮಾಡಿದ್ದಾರೆ. ಕಳೆದ ವರ್ಷ ನಟ ಪ್ರಭಾಸ್ ರಾವಣ ದಹನವನ್ನು ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ 50 ವರ್ಷಗಳ ಇತಿಹಾಸದಲ್ಲಿ ಮಹಿಳೆಯೊಬ್ಬರು ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಿದ್ದಾರೆ" ಎಂದು ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ:ಸಲ್ಮಾನ್ ಖಾನ್ಗೆ 'ಫ್ಲರ್ಟಿಂಗ್ ಸ್ಕಿಲ್' ಪ್ರದರ್ಶಿಸಲು ಹೇಳಿದ ಕಂಗನಾ ರಣಾವತ್- ವಿಡಿಯೋ ನೋಡಿ!