ಸಚಿವೆ ಸ್ಮೃತಿ ಇರಾನಿ ಅವರು ಡಿಸೆಂಬರ್ 14 ರಂದು ರಾಜ್ಯಸಭೆಯಲ್ಲಿ ಮಹಿಳೆಯರಿಗೆ 'ಪೀರಿಯಡ್ ಲೀವ್' ನೀಡುವ ಕುರಿತು ಚರ್ಚೆ ನಡೆಸಿದರು. ಋತುಚಕ್ರ ಮಹಿಳೆಯರ ಜೀವನದ ನೈಸರ್ಗಿಕ ಭಾಗ ಎಂಬುದನ್ನು ಒತ್ತಿ ಹೇಳಿದರು. ಇದನ್ನು ಅಂಗವಿಕಲತೆ ಎಂದು ಪರಿಗಣಿಸಬಾರದು ಎಂಬುದಾಗಿ ತಿಳಿಸಿದರು. ಜೊತೆಗೆ, 10 ರಿಂದ 19 ವರ್ಷ ವಯಸ್ಸಿನ ಹದಿಹರೆಯದ ಹುಡುಗಿಯರನ್ನು ಗಮನದಲ್ಲಿಟ್ಟಿಕೊಂಡು ಮಾಡಿರುವ 'ಋತುಚಕ್ರ ನೈರ್ಮಲ್ಯ ನಿರ್ವಹಣೆ' (MHM) ಯೋಜನೆಯನ್ನು ಸಚಿವರು ಎತ್ತಿ ಹಿಡಿದರು. ಸ್ಮೃತಿ ಇರಾನಿ ಅವರ ಈ ಹೇಳಿಕೆಯನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಬೆಂಬಲಿಸಿದ್ದಾರೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯೂಸಿಡಿ) ಇಲಾಖೆ ಸಚಿವರ ಹೇಳಿಕೆಯನ್ನು ಬೆಂಬಲಿಸಿರುವ ಧಾಕಡ್ ನಟಿ ಕಂಗನಾ ರಣಾವತ್ ಗುರುವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸಚಿವೆ ಸ್ಮೃತಿ ಇರಾನಿ ಅವರ ಸುದ್ದಿ ಹಂಚಿಕೊಂಡ ನಟಿ, ''ಕೆಲಸ ಮಾಡುವ ಮಹಿಳೆ ಒಂದು 'ಮಿಥ್', ಮನುಕುಲದ ಇತಿಹಾಸದಲ್ಲಿ ದುಡಿಯದ ಮಹಿಳೆ ಇಲ್ಲವೇ ಇಲ್ಲ. ವ್ಯವಸಾಯದಿಂದ ಹಿಡಿದು ಮನೆ ಕೆಲಸದಿಂದ, ಮಕ್ಕಳನ್ನು ಬೆಳೆಸುವವರೆಗೆ, ಮಹಿಳೆಯರು ಯಾವಾಗಲೂ ಕೆಲಸ ಮಾಡುತ್ತಿರುತ್ತಾರೆ. ಕುಟುಂಬ, ಸಮುದಾಯ ಅಥವಾ ರಾಷ್ಟ್ರದ ಮೇಲಿನ ಅವರ ಬದ್ಧತೆಗೆ ಯಾವ ವಿಚಾರಗಳೂ ಅಡ್ಡಿಯಾಗುವುದಿಲ್ಲ. ಇದೊಂದು (ಋತುಚಕ್ರ) ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿ. ಮಹಿಳೆಯರಿಗೆ ಅವರ ಋತುಚಕ್ರಕ್ಕೆ ಪೈಡ್ ಲೀವ್ನ ಅಗತ್ಯವಿಲ್ಲ. ಇದು ಋತುಚಕ್ರವೇ ಹೊರತು ರೋಗ ಅಥವಾ ಅಂಗವಿಕಲತೆ ಅಲ್ಲ ಎಂಬುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ'' ಎಂದು ಬರೆದುಕೊಂಡಿದ್ದಾರೆ.