ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾ, ಸೌಂದರ್ಯ, ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾರಿಗೂ ಅಂಜದೇ, ಬೋಲ್ಡ್ ಹೇಳಿಕೆಗಳ ಮೂಲಕ ಧೈರ್ಯವಂತೆಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ 'ದಿ ಕೇರಳ ಸ್ಟೋರಿ' ಸಿನಿಮಾ ಕುರಿತು ಹೇಳಿಕೆ ನೀಡಿದ್ದು, ಸಂಚಲನ ಸೃಷ್ಟಿಸಿದ್ದಾರೆ.
ಭಾರೀ ವಿವಾದಗಳ ನಡುವೆಯೇ 'ದಿ ಕೇರಳ ಸ್ಟೋರಿ' ಸಿನಿಮಾ ಶುಕ್ರವಾರ ತೆರೆಕಂಡಿದೆ. 40 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಮೊದಲ ದಿನವೇ 8.03 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇಂದು ಮತ್ತು ನಾಳೆ ವಾರಾಂತ್ಯವಾಗಿರುವ ಹಿನ್ನೆಲೆಯಲ್ಲಿ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಸಿನಿಮಾ ಬಗ್ಗೆ ನಿನ್ನೆ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದರು. ಇದೀಗ ಕಂಗನಾ ರಣಾವತ್ ಕೂಡ ಈ ಚಿತ್ರದ ಪ್ರತಿಕ್ರಿಯೆ ವಿಭಾಗಗಕ್ಕೆ ಧುಮುಕಿದ್ದಾರೆ.
ಸುದಿಪ್ತೋ ಸೇನ್ ನಿರ್ದೇಶನದ, ವಿಪುಲ್ ಅಮೃತಲಾಲ್ ಶಾ ನಿರ್ಮಾಣದ ಈ ಚಿತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಸೇರಿದಂತೆ ಹಲವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ವಿವಾದಕ್ಕೊಳಗಾಗಿದ್ದ ಈ ಚಿತ್ರ, ಟ್ರೇಲರ್ ಮೂಲಕ ಭಾರಿ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತು. ನಿನ್ನೆ ತೆರೆಕಂಡಿರುವ ಈ ಚಿತ್ರ ವಿವಾದಗಳ ಕೇಂದ್ರವಾಗಿದೆ. ಪರ ವಿರೋಧ ಚರ್ಚೆಗೆ ವೇದಿಕೆ ಸೃಷ್ಟಿಸಿದೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಬಾಲಿವುಡ್ ನಟಿ ಕಂಗನಾ ರಣಾವತ್, 'ದಿ ಕೇರಳ ಸ್ಟೋರಿ ಚಿತ್ರದಿಂದ ಯಾರಾದರು ತಮ್ಮ ಮೇಲೆ ದಾಳಿ ಆಗಿದೆ ಎಂದು ಭಾವಿಸಿದರೆ ಅವರು ಭಯೋತ್ಪಾದಕರು' ಎಂದು ಹೇಳಿದ್ದಾರೆ. ನಾನು ಚಿತ್ರವನ್ನು ನೋಡಿಲ್ಲ, ಆದರೆ ಅದನ್ನು ನಿಷೇಧಿಸಲು ಸಾಕಷ್ಟು ಪ್ರಯತ್ನಗಳು ನಡೆದಿವೆ ಎಂಬ ಸುದ್ದಿಯನ್ನು ಇಂದು ಓದಿ ತಿಳಿದುಕೊಂಡೆ. ತಪ್ಪಾಗಿದ್ದರೆ ನನ್ನ ಹೇಳಿಕೆ ಸರಿಪಡಿಸಿ ಎಂದು ನಟಿ ತಿಳಿಸಿದ್ದಾರೆ.