ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆಯ 'ತೇಜಸ್' ಸಿನಿಮಾ ಇಂದು ಅದ್ಧೂರಿಯಾಗಿ ತೆರೆ ಕಂಡಿದೆ. ಇತ್ತೀಚೆಗಷ್ಟೇ ಅವರ 'ಚಂದ್ರಮುಖಿ 2' ಚಿತ್ರ ತೆರೆಕಂಡಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರಲಿಲ್ಲ. ಇದೀಗ 'ತೇಜಸ್' ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರವನ್ನು ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿದ್ದಾರೆ.
ಪ್ರೇಕ್ಷಕರು ಹೇಳಿದ್ದೇನು?: 'ತೇಜಸ್' ಸಿನಿಮಾ ಎಕ್ಸ್ನಲ್ಲಿ ಬಗೆ ಬಗೆಯ ಕಮೆಂಟ್ಗಳನ್ನು ಸ್ವೀಕರಿಸಿದೆ. ಗಂಭೀರವಾಗಿ ಹೇಳಬೇಕಾದ ಕಥೆಯನ್ನು ಹಾಸ್ಯರೂಪದಲ್ಲಿ ಹೇಳಲಾಗಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಕಾರಾತ್ಮಕ ಕಮೆಂಟ್ಗಳ ಮಧ್ಯೆಯೂ ಆ್ಯಕ್ಷನ್ ಸೀಕ್ವೆನ್ಸ್ ಹಾಗೂ ದೇಶಪ್ರೇಮವನ್ನು ಸಾರಿದ್ದಕ್ಕಾಗಿ ಚಿತ್ರವು ಪ್ರಶಂಸೆಯನ್ನು ಕೂಡ ಪಡೆದುಕೊಂಡಿದೆ ಎಂಬುದು ಗಮನಾರ್ಹ ವಿಚಾರ. ಕಂಗನಾ ರಣಾವತ್ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರದಲ್ಲಿ ತೇಜಸ್ ಗಿಲ್ ಪಾತ್ರಕ್ಕೆ ಕಂಗನಾ ರಣಾವತ್ ಜೀವ ತುಂಬಿದ್ದಾರೆ. ತಮ್ಮ ಕೋಚ್ ಮಾರ್ಗದರ್ಶನದಲ್ಲಿ ಹೊರಹೊಮ್ಮಿದ ಅತ್ಯಂತ ಧೈರ್ಯಶಾಲಿ, ಫೈಟರ್ ಪೈಲಟ್ ಎಂದು ಕಂಗನಾರನ್ನು ಪರಿಚಯಿಸಲಾಗಿದೆ. ತೇಜಸ್ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಗೂಢಾಚಾರನನ್ನು ಪಾಕಿಸ್ತಾನದಲ್ಲಿ ಭಯೋತ್ಪಾದಕರು ಸೆರೆ ಹಿಡಿದು ಹಿಂಸಿಸಿದ ಹಿನ್ನೆಲೆ, ಘಟನೆ ತೀವ್ರ ಸ್ವರೂಪ ಪಡೆಯುತ್ತದೆ. ಗೂಢಾಚಾರಿಯನ್ನು ರಕ್ಷಿಸಲು ತನಗೆ ಅವಕಾಶ ನೀಡುವಂತೆ ತೇಜಸ್ ತಮ್ಮ ಹಿರಿಯರಲ್ಲಿ ವಿನಂತಿಸುತ್ತಾರೆ. ಹೀಗೆ ಸಿನಿಮಾ ರೋಮಾಂಚಕ ಆ್ಯಕ್ಷನ್ ಸೀಕ್ವೆನ್ಸ್, ಡೈಲಾಗ್ಸ್ ಮೂಲಕ ಗಮನ ಸೆಳೆಯುತ್ತಿದೆ.