ಎಮರ್ಜೆನ್ಸಿ (Emergency) 2023ರ ಬಹುನಿರೀಕ್ಷಿತ ಬಯೋಪಿಕ್. ರಾಜಕೀಯ ಹಿನ್ನೆಲೆಯುಳ್ಳ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ. 'ಎಮರ್ಜೆನ್ಸಿ'ಯಲ್ಲಿ ಕಂಗನಾ ರಣಾವತ್ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪಾತ್ರ ನಿರ್ವಹಿಸಿದ್ದಾರೆ. ನಟನೆ ಮಾತ್ರವಲ್ಲದೇ ನಿರ್ದೇಶನ, ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.
''ಇತಿಹಾಸದ ಕರಾಳ ಹಂತ": ಕಂಗನಾ ರಣಾವತ್ ಶನಿವಾರ ಎಮರ್ಜೆನ್ಸಿ ಟೀಸರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಏಕವ್ಯಕ್ತಿ ನಿರ್ದೇಶಕರಾಗಿ ಕಂಗನಾರ ಚೊಚ್ಚಲ ಪ್ರಯತ್ನವಿದು. ಟೀಸರ್ ಹಂಚಿಕೊಳ್ಳುವುದರ ಜೊತೆಗೆ ಚಿತ್ರದ ಬಿಡುಗಡೆಯ ದಿನಾಂಕವನ್ನೂ ಸಹ ಬಹಿರಂಗಪಡಿಸಿದ್ದಾರೆ. ಕುತೂಹಲ ಕೆರಳಿಸುವ ಟೀಸರ್ ಹಂಚಿಕೊಂಡ ಪ್ರತಿಭಾನ್ವಿತ ನಟಿ ಕಂಗನಾ ರಣಾವತ್, ತುರ್ತು ಪರಿಸ್ಥಿತಿಯನ್ನು "ನಮ್ಮ ಇತಿಹಾಸದ ಕರಾಳ ಹಂತ" ಎಂದು ಕರೆದಿದ್ದಾರೆ.
ಎಮರ್ಜೆನ್ಸಿ ಬಿಡುಗಡೆ ದಿನಾಂಕ: 'ಎಮರ್ಜೆನ್ಸಿ' ನಿರ್ದೇಶಿಸಿರುವ ಕಂಗನಾ ರಣಾವತ್ ಈ ಚಿತ್ರದಲ್ಲಿ ಭಾರತದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಮೊದಲೇ ತಿಳಿಸಿದಂತೆ, ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ ಘಟನೆಯನ್ನು ಚಿತ್ರ ಹೇಳಲಿದೆ. ಟೀಸರ್ನಲ್ಲಿ ಬರುವ 'ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ' ಸಾಲು ಪ್ರೇಕ್ಷಕರ ಗಮನ ಸೆಳೆದಿದೆ. ನವೆಂಬರ್ 24ರಂದು ಎಮರ್ಜೆನ್ಸಿಸಿನಿಮಾ ಬಿಡುಗಡೆ ಆಗುವುದಾಗಿಯೂ ನಟಿ ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿ ಘೋಷಣೆಯಾಗಿ 48 ವರ್ಷ: ಇನ್‌ಸ್ಟಾಗ್ರಾಮ್‌ನಲ್ಲಿ ಎಮರ್ಜೆನ್ಸಿ ಟೀಸರ್ ಅನ್ನು ಹಂಚಿಕೊಂಡ ಕಂಗನಾ, "ಒಬ್ಬ ರಕ್ಷಕರೋ ಅಥವಾ ಸರ್ವಾಧಿಕಾರಿಯೋ? ರಾಷ್ಟ್ರ ನಾಯಕರು ತಮ್ಮ ಜನರ ಮೇಲೆ ಯುದ್ಧವನ್ನು ಘೋಷಿಸಿದ ಸಂದರ್ಭವು ಇತಿಹಾಸದ ಕರಾಳ ಘಟ್ಟ" ಎಂದು ಬರೆದಿದ್ದಾರೆ. ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಆಗಿ ಇಂದಿಗೆ 48 ವರ್ಷಗಳು ತುಂಬಿವೆ.