ಬಾಲಿವುಡ್ ಕ್ವೀನ್ ಖ್ಯಾತಿಯ ಕಂಗನಾ ರಣಾವತ್ ಅವರು ವಿಭಿನ್ನ ಸಿನಿಮಾ, ಅದ್ಭುತ ಪಾತ್ರ, ಅತ್ಯುತ್ತಮ ನಟನೆ ಮಾತ್ರವಲ್ಲದೇ ಸ್ಟೇಟ್ಮೆಂಟ್ಸ್ ಸಲುವಾಗಿಯೂ ಸಖತ್ ಸುದ್ದಿಯಲ್ಲಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ನೇರವಾಗಿ ವ್ಯಕ್ತಪಡಿಸುವ ನಟಿಮಣಿಯರ ಪೈಕಿ ಇವರು ಮೊದಲಿಗರು. ಇದೀಗ ಬಿಜೆಪಿ ಸಂಸದ ರಮೇಶ್ ಬಿಧುರಿ ಕುರಿತು ಮಾತನಾಡಿದ್ದಾರೆ ಎನ್ನಲಾದ ಹೇಳಿಕೆಗಳು ಸದ್ದು ಮಾಡುತ್ತಿವೆ.
ಕೆನಡಾ ಮೂಲದ ಪಂಜಾಬಿ ಗಾಯಕ ಶುಭ್ನೀತ್ ಸಿಂಗ್ (Shubhneet Singh) ಅವರ ಪೋಸ್ಟ್‌ಗೆ ನಟಿ ಖಾರವಾಗಿ ಪ್ರತ್ಯುತ್ತರ ನೀಡಿದ್ದರು. ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೂ ಸಹ ಕಂಗನಾ ಟೀಕಿಸಿದ್ದರು. ಇದೆಲ್ಲದರ ನಡುವೆ ಇದೀಗ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಅವರ ವಿರುದ್ಧ ನೀಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಹೇಳಿಕೆಗೂ ಕಂಗನಾ ಪ್ರತಿಕ್ರಿಯಿಸಿದ್ದಾರೆ.
ಕ್ವೀನ್ ನಟಿ ಕಂಗನಾ ರಣಾವತ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದ ಪೋಸ್ಟ್ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ರೀ ಶೇರ್ ಮಾಡಿಕೊಂಡಿದ್ದು, ''ಯಾರೂ ಕೂಡ ಮಿತಿ ಮೀರಬಾರದು, ಒಂದು ವೇಳೆ ಯಾರೇ ಆದರೂ ಆ ಗೆರೆ ದಾಟಿದರೆ ಅದರ ಪರಿಣಾಮ ಶೀಘ್ರ ಶಮನವಾಗುವುದಿಲ್ಲ. ಅದರಲ್ಲಿ, ಎಷ್ಟು ದೂರ ನಾವು ಮುನ್ನಡೆಯಬಹುದು?. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಾತುಗಳನ್ನು ಅನುಸರಿಸಿ ಎಂದು ಎಲ್ಲರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಘನತೆ ಕಾಪಾಡಿಕೊಳ್ಳಿ, ಜೈ ಶ್ರೀರಾಮ್'' ಎಂದು ಬರೆದುಕೊಂಡಿದ್ದಾರೆ.