ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ತೇಜಸ್'. ಇತ್ತೀಚೆಗಷ್ಟೇ ಅವರ ನಟನೆಯ 'ಚಂದ್ರಮುಖಿ 2' ಸಿನಿಮಾ ತೆರೆಕಂಡಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಈ ಹಿನ್ನೆಲೆ ನಟಿಯ ಮುಂದಿನ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸದ್ಯ 'ತೇಜಸ್' ಚಿತ್ರದ ಪ್ರಚಾರ ಕಾರ್ಯದಲ್ಲಿ ಕಂಗನಾ ಬ್ಯುಸಿಯಾಗಿದ್ದಾರೆ.
ಈ ಹಿನ್ನೆಲೆ ಶನಿವಾರ ಅವರು ದೆಹಲಿಯ ಇಂಡಿಯನ್ ಏರ್ಫೋರ್ಸ್ ಅಡಿಟೋರಿಯಂನಲ್ಲಿ ಆಕ್ಷನ್ ಥ್ರಿಲ್ಲರ್ 'ತೇಜಸ್' ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು. ಇದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಹಲವು ಭಾರತೀಯ ವಾಯುಪಡೆಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ವೊಂದನ್ನು ಕಂಗನಾ ರಣಾವತ್ ಹಂಚಿಕೊಂಡಿದ್ದಾರೆ.
ರಕ್ಷಣಾ ಸಚಿವರೊಂದಿಗಿನ ಫೋಟೋವನ್ನು ಶೇರ್ ಮಾಡಿರುವ ಅವರು, "ಗೌರವಾನ್ವಿತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಭಾರತೀಯ ವಾಯುಪಡೆಯ ಅನೇಕ ಗಣ್ಯರಿಗೆ ಇಂದು ಸಂಜೆ (ಶನಿವಾರ) ಭಾರತೀಯ ವಾಯುಪಡೆಯ ಸಭಾಂಗಣದಲ್ಲಿ ತೇಜಸ್ ತಂಡ ವಿಶೇಷ ಸ್ಕ್ರೀನಿಂಗ್ ನಡೆಸಿತು. ನಮ್ಮ ದೇಶದ ಸೈನಿಕರಿಗಾಗಿ ಮೀಸಲಾದ ಈ ಸಿನಿಮಾವನ್ನು ನೋಡುವುದು ಅವರಿಗೆ ರೋಮಾಂಚನಕಾರಿ ಅನುಭವ ನೀಡಿತು. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ PVSM, UYSM, AVSM, SM, VSM ಚಲನಚಿತ್ರಗಳನ್ನು ವೀಕ್ಷಿಸಿದ ನಂತರ ಅವರು ತಮ್ಮ ಜಾಕೆಟ್ನಿಂದ ಫೈಟರ್ ಜೆಟ್ ಆಕಾರದ ಬ್ರೂಚ್ ಅನ್ನು ತೆಗೆದು ನನ್ನ ನಿರ್ದೇಶಕ ಸರ್ವೇಶ್ ಮೇವಾರಾ ಅವರಿಗೆ ಉಡುಗೊರೆಯಾಗಿ ನೀಡಿದರು. ಈ ಆತಿಥ್ಯ ನಮ್ಮನ್ನು ಆಳವಾಗಿ ತಲುಪಿತು. ನಮ್ಮ ಪ್ರಯತ್ನದಲ್ಲಿ ಗೆದ್ದಿದ್ದೇವೆ ಎಂದು ತೋರುತ್ತದೆ. ಅಕ್ಟೋಬರ್ 27ರಂದು ನಿಮ್ಮೆಲ್ಲರ ಮುಂದೆ 'ತೇಜಸ್' ಚಿತ್ರವನ್ನು ತರಲು ನಾವು ಥ್ರಿಲ್ಲ್ ಆಗಿದ್ದೇವೆ" ಎಂದು ಬರೆದುಕೊಂಡಿದ್ದಾರೆ.