ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿ ಮಾಡುವ ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರಹಸ್ಯವಾದ ಫೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. "casanova" ಎಂದು ಉಲ್ಲೇಖಿಸಿ ಪೋಸ್ಟ್ ಹಾಕಿದ್ದು, ಇದು ನಟ ರಣ್ಬೀರ್ ಕಪೂರ್ ಅವರ ಮೇಲಿರುವ ಆರೋಪ ಎಂದು ಹೇಳಲಾಗುತ್ತಿದೆ. "ಕ್ಯಾಸನೋವಾ" ನೆಪೋಟಿಸಂ (ಸ್ವಜನ ಪಕ್ಷಪಾತ) ಮಾಫಿಯಾ ಕ್ಲಬ್‌ನ ಉಪಾಧ್ಯಕ್ಷ ಎಂದು ತಮ್ಮ ಸ್ಟೋರಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಅವರು ವ್ಯಕ್ತಿಯ (ನಟ ಮತ್ತು ಆವರ ಪತ್ನಿ) ಹೆಸರನ್ನು ಬಹಿರಂಗಪಡಿಸಲಿಲ್ಲ.
ಕಂಗನಾ ರಣಾವತ್ ಇನ್ಸ್ಟಾ ಸ್ಟೋರಿ: "ನಾನು ಹೋದಲ್ಲೆಲ್ಲಾ ನನ್ನನ್ನು ಹಿಂಬಾಲಿಸಲಾಗುತ್ತಿದೆ ಮತ್ತು ಬೇಹುಗಾರಿಕೆ ಮಾಡಲಾಗುತ್ತಿದೆ. ರಸ್ತೆಗಳಲ್ಲಿ ಮಾತ್ರವಲ್ಲದೇ ನನ್ನ ಕಟ್ಟಡದ ಪಾರ್ಕಿಂಗ್ ಏರಿಯಾ ಮತ್ತು ಮನೆಯ ಟೆರೆಸ್ನಲ್ಲಿಯೂ ಅವರು ನನ್ನನ್ನು ಸೆರೆಹಿಡಿಯಲು ಝೂಮ್ ಲೆನ್ಸ್‌ಗಳನ್ನು ಬಳಸುತ್ತಾರೆ. ಪಾಪರಾಜಿಗಳು ಮಾತ್ರ ನಟ ನಟಿಯರ ಮನೆ ಮುಂದೆಯೋ ಅಥವಾ ಅವರು ಹೋಗುವ ಸ್ಥಳಗಳಿಗೆ ಬರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ನಾನಾಗಲಿ ಅಥವಾ ನನ್ನ ತಂಡವಾಗಲಿ ಅವರಿಗೆ ಯಾವುದೇ ರೀತಿಯ ಹಣವನ್ನು ಪಾವತಿಸುತ್ತಿಲ್ಲ. ನನ್ನ ಫೋಟೋ ಕ್ಲಿಕ್ ಮಾಡಲು ಹೇಳಿಲ್ಲ. ಅವರಿಗೆ ಯಾರು ಹಣ ಪಾವತಿಸುತ್ತಿದ್ದಾರೆ?. ಬೆಳಗ್ಗೆ 6:30ಕ್ಕೆ ನನ್ನ ಫೋಟೋ ಕ್ಲಿಕ್ ಮಾಡಲಾಗಿದೆ. ಅವರು ನನ್ನ ದಿನನಿತ್ಯದ ವೇಳಾಪಟ್ಟಿಯನ್ನು ಹೇಗೆ ಪಡೆಯುತ್ತಾರೆ?. ನನ್ನ ಫೋಟೋಗಳನ್ನು ಇಟ್ಟುಕೊಂಡು ಅವರು ಏನು ಮಾಡುತ್ತಾರೆ?. ನಾನು ನನ್ನ ಮುಂಜಾನೆಯ ನೃತ್ಯ ಸಂಯೋಜನೆಯ ಅಭ್ಯಾಸವನ್ನು ಮುಗಿಸಿದ ಬಳಿಕ ಯಾರೂ ಕೂಡ ಸ್ಟುಡಿಯೋಗೆ ಬರುವ ಬಗ್ಗೆ ಸುಳಿವು ನೀಡಲಿಲ್ಲ. ಆದರೆ ಅವರೆಲ್ಲರೂ ಭಾನುವಾರದಂದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದರು" ಎಂದು ನಟಿ ಕಂಗನಾ ರಣಾವತ್ ಬರೆದುಕೊಂಡಿದ್ದಾರೆ.
"ವೃತ್ತಿಪರ ವ್ಯವಹಾರಗಳು, ವೈಯಕ್ತಿಕ ಜೀವನದ ವಿವರಗಳ ಬಗ್ಗೆ ನನ್ನ ವಾಟ್ಸಾಪ್ ಡೇಟಾ ಸೋರಿಕೆ ಆಗುತ್ತಿದೆ ಎಂದು ನನಗೆ ತಿಳಿದಿದೆ. ನೆಪೋ ಮಾಫಿಯಾದವರು ಆಹ್ವಾನಿಸದೇ ನನ್ನ ಮನೆ ಬಾಗಿಲಿಗೆ ಬಂದಿದ್ದಾರೆ. ಕ್ಯಾಸನೋವಾ ಈಗ ನೆಪೋಟಿಸಂ ಮಾಫಿಯಾ ಬ್ರಿಗೇಡ್‌ನ ಉಪಾಧ್ಯಕ್ಷ ಸದ್ಯ ತನ್ನ ಹೆಂಡತಿಯನ್ನು ನಿರ್ಮಾಪಕಿಯಾಗಲು, ಹೆಚ್ಚು ಮಹಿಳಾ ಕೇಂದ್ರಿತ ಚಲನಚಿತ್ರಗಳನ್ನು ಮಾಡಲು, ನನ್ನಂತೆ ಆಕೆ ಡ್ರೆಸ್ ಮಾಡಲು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಅವರು ನನ್ನ ಸ್ಟೈಲಿಸ್ಟ್ ಮತ್ತು ಮನೆಯ ಸ್ಟೈಲಿಸ್ಟ್‌ಗಳನ್ನು ಸಹ ನೇಮಿಸಿಕೊಂಡರು. ಬಳಿಕ ಅವರು ನನ್ನೊಂದಿಗೆ ಕೆಲಸ ಮಾಡಲು ನಿರಾಕರಿಸಿದರು ಎಂದು ಕೂಡ ಕಂಗನಾ ರಣಾವತ್ ಹೇಳಿದರು.
ಅಲ್ಲದೇ ಆತನ ಪತ್ನಿ ಕೂಡ ಈ ನಡವಳಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ನನ್ನ ಸಹೋದರನ ಮದುವೆಯ ಆರತಕ್ಷತೆಗಾಗಿ ನಾನು ಈ ಹಿಂದೆ ಧರಿಸಿದ್ದ ಸೀರೆ ಕಾಪಿ ಮಾಡಿ ಅವರ ಮದುವೆಗೆ ಧರಿಸಿದ್ದರು. ನನಗೆ ತಿಳಿದಿರುವ ಚಲನಚಿತ್ರ ವಸ್ತ್ರ ವಿನ್ಯಾಸಕ (ಬೆಸ್ಟ್ ಫ್ರೆಂಡ್) ಒಂದು ದಶಕಕ್ಕೂ ಹೆಚ್ಚು ಕಾಲ ನನ್ನೊಂದಿಗೆ ಕೆಲಸ ಮಾಡಿ ಬಳಿಕ ನಮ್ಮ ವ್ಯಾವಹಾರಿಕ ಸಂಬಂಧ ಕೊನೆಗೊಂಡಿತ್ತು. ಕಾಕತಾಳೀಯವಾಗಿ ಅವರು ಈಗ ಆ ದಂಪತಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ನನ್ನ ಹಣಕಾಸುದಾರರು ಅಥವಾ ವ್ಯಾಪಾರ ಪಾಲುದಾರರು ಯಾವುದೇ ಕಾರಣವಿಲ್ಲದೇ ಕೊನೆ ಕ್ಷಣದಲ್ಲಿ ಒಪ್ಪಂದಗಳನ್ನು ರದ್ದುಗೊಳಿಸುತ್ತಾರೆ. ಆ ದಂಪತಿ ನನ್ನನ್ನು ಮಾನಸಿಕ ಒತ್ತಡಕ್ಕೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂಗನಾ ವ್ಯಕ್ತಿಯೊಬ್ಬರ ಮೇಲೆ ಆರೋಪಗಳ ಮಳೆ ಸುರಿಸಿದ್ದಾರೆ.