ಹೊಸ ಸಂಸತ್ ಭವನ ಪ್ರವೇಶಿಸಿದ ಮೊದಲ ದಿನವೇ ಪ್ರಥಮ ಮಸೂದೆಯಾಗಿ ಮಹಿಳಾ ಮೀಸಲಾತಿ ವಿಧೇಯಕವನ್ನು ಕೇಂದ್ರ ಸರ್ಕಾರ ಮಂಗಳವಾರ ಮಂಡಿಸಿದೆ.ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಈ ನಡೆಗೆ ಬಾಲಿವುಡ್ ನಟಿಯರಾದ ಕಂಗನಾ ರಣಾವತ್ ಇಶಾ ಗುಪ್ತಾ ಮತ್ತು ಹೇಮಾ ಮಾಲಿನಿ ಸಂತಸ ವ್ಯಕ್ತಪಡಿಸಿದ್ದಾರೆ. ಇಬ್ಬರು ತಾರೆಯರು ಮೋದಿಯವರ ಉದಾತ್ತ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಇಶಾ ಗುಪ್ತಾ ರಾಜಕೀಯದ ಭಾಗವಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವ ಬಾಲಿವುಡ್ ಲೇಡಿ ಡಾನ್ ಕಂಗನಾ ರಣಾವತ್ ಅವರಿಗೆ ಸರ್ಕಾರದ ಈ ನಡೆ ಖುಷಿ ತಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಇದೊಂದು ಐತಿಹಾಸಿಕ ದಿನ. ಇದು (ಹೊಸ ಸಂಸತ್ತಿನ ಕಟ್ಟಡ) ಅಮೃತಕಾಲದ ಸಂಕೇತವಾಗಿದೆ. ಈ ಮಹತ್ವದ ದಿನದಂದು ಬಿಜೆಪಿಗೆ ಯಾವುದೇ ವಿಷಯ ಅಥವಾ ಯಾವುದೇ ಮಸೂದೆಯ ಬಗ್ಗೆ ಮಾತನಾಡಬಹುದಿತ್ತು. ಆದರೆ ಅವರು ಮಹಿಳಾ ಸಬಲೀಕರಣವನ್ನು ಆಯ್ಕೆ ಮಾಡಿಕೊಂಡರು. ಇದು ಅವರ ಆಲೋಚನಾ ಶಕ್ತಿ ಮತ್ತು ಮನಸ್ಥಿತಿಯನ್ನು ತೋರಿಸುತ್ತದೆ. ನಮ್ಮ ದೇಶವು ಸಮರ್ಥರ ಕೈಯಲ್ಲಿದೆ. ಪ್ರಧಾನಿ ಮೋದಿಯವರು ಮಹಿಳೆಯರಿಗೆ ಮೊದಲ ಆಧ್ಯತೆ ನೀಡಿದ್ದಾರೆ. ಇದು ನಿಜಕ್ಕೂ ಅದ್ಭುತವಾಗಿದೆ" ಎಂದರು.
ಇದನ್ನೂ ಓದಿ:Women's reservation bill: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ
ನಟಿ ಇಶಾ ಗುಪ್ತಾ ಕೂಡ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಸೂಚಿಸಿದ್ದಾರೆ. "ಹೊಸ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ಈ ವಿಚಾರವನ್ನು ಪ್ರಸ್ತುತಪಡಿಸಿರುವುದು ಒಂದು ಸುಂದರ ವಿಷಯ. ಇದು ಅತ್ಯಂತ ಪ್ರಗತಿಪರ ಚಿಂತನೆಯಾಗಿದೆ" ಎಂದು ಹೇಳಿದರು. ಜೊತೆಗೆ, "ನನಗೆ ಬಾಲ್ಯದಿಂದಲೂ ರಾಜಕೀಯ ಸೇರಬೇಕೆಂದು ಆಸೆಯಿತ್ತು. ಅದರ ಬಗ್ಗೆ ಯೋಚಿಸಿದ್ದೆ ಕೂಡ. ಈ ಮಸೂದೆ ಅಂಗೀಕಾರವಾದಲ್ಲಿ ನೀವು ನನ್ನನ್ನು 2026 ರಲ್ಲಿ ರಾಜಕೀಯದಲ್ಲಿ ನೋಡುತ್ತೀರಿ" ಎಂದು ತಿಳಿಸಿದರು.
ಬಳಿಕ ಮಾತನಾಡಿದ ನಟಿ ಹೇಮಾ ಮಾಲಿನಿ, "ಸೆಪ್ಟೆಂಬರ್ 19 ಐತಿಹಾಸಿಕ ದಿನವಾಗಿದೆ. ಹೊಸ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸಲಾಯಿತು. ಇದನ್ನು ಶೀಘ್ರದಲ್ಲೇ ಅಂಗೀಕರಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ಪ್ರಸ್ತುತ ನಾವು 81 ಮಹಿಳಾ ಸಂಸದರಿದ್ದೇವೆ. ಈ ಮಸೂದೆಯ ನಂತರ ನಮ್ಮ ಸಂಖ್ಯೆ 181 ಆಗಲಿದೆ. ಹಾಗಾಗಿ ಮಹಿಳಾ ಪ್ರಾತಿನಿಧ್ಯ ಹೆಚ್ಚಲಿದೆ. ಮಹಿಳೆಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಮುಂದೆ ಬರಬೇಕು. ನಿಮಗೆ ಹಾರಲು ಆಕಾಶ ತೆರೆದಿದೆ" ಎಂದು ಹೇಳಿದರು. ಹೊಸ ಸಂಸತ್ತಿನ ವಿಶೇಷ ಮಹಿಳಾ ಆಹ್ವಾನಿತರಲ್ಲಿ ಕಂಗನಾ ರಣಾವತ್, ಇಶಾ ಗುಪ್ತಾ, ಹೇಮಾ ಮಾಲಿನಿ ಹಾಗೂ ಸಪ್ನಾ ಚೌಧರಿ ಸೇರಿದ್ದಾರೆ.
ಇದನ್ನೂ ಓದಿ:Women's reservation bill : ಮಹಿಳಾ ಮೀಸಲಾತಿ ಮಸೂದೆ ಸಾಗಿ ಬಂದ ಹಾದಿ