ವಿಭಿನ್ನ ಕಥಾಹಂದರ ಹೊಂದಿರುವ 'ಕಾಣೆಯಾದವರ ಬಗ್ಗೆ ಪ್ರಕಟಣೆ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭ ಮಂಗಳವಾರ ನಡೆಯಿತು. ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ದುನಿಯಾ ವಿಜಯ್ ಮಾತನಾಡಿ, ನಿರ್ದೇಶಕ ಅನಿಲ್ಗೆ ಬರವಣಿಗೆಯಲ್ಲಿ ಬಹಳ ಆಸಕ್ತಿಯಿದೆ. ಆತನ ಸಂಭಾಷಣೆಯಲ್ಲಿ ಉತ್ತಮ ಚಿತ್ರಗಳು ಬಂದಿವೆ. ನಿರ್ದೇಶಕನಾಗಿಯೂ ಆತ ಚಿರಪರಿಚಿತ. ಈಗ ತೀರ ಅಪರೂಪವೆಂಬ ಕಥಾವಸ್ತು ಆಯ್ಕೆಮಾಡಿಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು.
ನಟ ಡಾಲಿ ಧನಂಜಯ್ ಮಾತನಾಡಿ, ಒಬ್ಬ ನಾಯಕ ಎರಡೂವರೆ ಗಂಟೆಗಳ ಕಾಲ ಒಬ್ಬನೇ ತೆರೆಯ ಮೆಲೆ ಕಾಣಲು ಸಾಧ್ಯವಿಲ್ಲ. ನಾಯಕನಿಗೆ ಇಲ್ಲಿರುವ ಅದ್ಭುತ ಕಲಾವಿದರ ಸಹಕಾರ ಬೇಕು. ನಮ್ಮ ಚಿತ್ರದಲ್ಲಿ ರಘು ಅಣ್ಣ ಮಾಡಿರುವ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಕಲಾವಿದರ ಸಂಗಮದಲ್ಲಿ ಮೂಡಿಬಂದಿರುವ ಈ ಚಿತ್ರ ನೋಡಲು ನಾನು ಕಾತರಾನಾಗಿದ್ದೀನಿ ಎಂದು ಹೇಳಿದರು.
ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದುನಿಯಾ ವಿಜಯ್ ಹಾಗೂ ಡಾಲಿ ಅವರಿಗೆ ಧನ್ಯವಾದ. ಇದೊಂದು ವಿಭಿನ್ನ ಕಥಾವಸ್ತು. ರಂಗಾಯಣ ರಘು, ರವಿಶಂಕರ್, ತಬಲ ನಾಣಿ, ಚಿಕ್ಕಣ್ಣ, ತಿಲಕ್, ಆಶಿಕಾ ರಂಗನಾಥ್ ಮುಂತಾದ ಕಲಾವಿದರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ನನ್ನ ಅಣ್ಣ ಜಿತೇಂದ್ರ ಮಂಜುನಾಥ್ ನಮ್ಮ ಚಿತ್ರಕ್ಕೆ ಹಣ ಹೂಡಿದ್ದಾರೆ. ಈ ಚಿತ್ರಕ್ಕೆ ನನ್ನ ಸ್ನೇಹಿತರ ಸಹಕಾರ ಅಪಾರ. ಈಗ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಮೇನಲ್ಲಿ ಚಿತ್ರ ತೆರೆಗೆ ತರುತ್ತೇವೆ ಎಂದರು ನಿರ್ದೇಶಕ ಅನಿಲ್ ಕುಮಾರ್ ಹೇಳಿದರು.