ಕರ್ನಾಟಕ

karnataka

ETV Bharat / entertainment

ಗೆಳೆಯ ರಜನಿ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿರುವ ಅಭಿಮಾನಿ; ಕಮಲ್​ ಹಾಸನ್​ ರಿಯಾಕ್ಷನ್​ ಹೀಗಿತ್ತು.. - ಈಟಿವಿ ಭಾರತ ಕನ್ನಡ

ನಟ ಕಮಲ್​ ಹಾಸನ್ ಅವರು ರಜನಿಕಾಂತ್​ ಮತ್ತು ಲೋಕೇಶ್​ ಕನಕರಾಜ್​ ಕಾಂಬೋದಲ್ಲಿ ಮೂಡಿಬರುತ್ತಿರುವ ಸಿನಿಮಾದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Kamal Hassan talks about relationship with Rajini
ಗೆಳೆಯ ರಜನಿ ಸಿನಿಮಾಗೆ ಆಕ್ಷನ್​ ಕಟ್​ ಹೇಳುತ್ತಿರುವ ಅಭಿಮಾನಿ

By ETV Bharat Karnataka Team

Published : Sep 17, 2023, 8:04 PM IST

ಸೂಪರ್​ಸ್ಟಾರ್​ ರಜನಿಕಾಂತ್​ ಮತ್ತು ಯೂನಿವರ್ಸಲ್​ ಸ್ಟಾರ್​ ಕಮಲ್​ ಹಾಸನ್ ನಡುವೆ ಉತ್ತಮ ಗೆಳೆತನವಿದೆ. ಈಗಾಗಲೇ ಈ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ಕಮಲ್​ ಹಾಸನ್​ ಮತ್ತೊಮ್ಮೆ ರಜನಿ ಜೊತೆಗಿನ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ. ಅವರು ಪ್ರತಿಷ್ಠಿತ ಸೈಮಾ ಅವಾರ್ಡ್ಸ್ (SIIMA Awards 2023)​ ವೇದಿಕೆಯಲ್ಲಿ ರಜನಿಕಾಂತ್​ ಬಗ್ಗೆ ಮಾತನಾಡಿದ್ದಾರೆ. 'ವಿಕ್ರಮ್'​ ಚಿತ್ರಕ್ಕಾಗಿ ಕಮಲ್​ ಹಾಸನ್​ ಅವರು ಈ ವರ್ಷದ ಅತ್ಯುತ್ತಮ ನಟ ಸೈಮಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಈ ವೇಳೆ ಮೈಕ್​ ಹಿಡಿದು ಮಾತು ಶುರು ಮಾಡಿದ ಸ್ಟಾರ್ ನಟ​, ತಮ್ಮ 'ವಿಕ್ರಮ್'​ ಚಿತ್ರದ ನಿರ್ದೇಶಕ ಹಾಗೂ ಅವರ ಅಭಿಮಾನಿ ಲೋಕೇಶ್​ ಕನಕರಾಜ್​ ಅವರನ್ನು ಶ್ಲಾಘಿಸಿದರು. ಬಳಿಕ ರಜನಿಕಾಂತ್​ ಮತ್ತು ಲೋಕೇಶ್​ ಕಾಂಬೋದಲ್ಲಿ ಮೂಡಿಬರುತ್ತಿರುವ ಸಿನಿಮಾದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ತಲೈವಾ ಜೊತೆ ಲೋಕೇಶ್​ ಸಿನಿಮಾ ಮಾಡುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ನನ್ನ ಮತ್ತು ರಜನಿ ಮಧ್ಯೆ ಕೇವಲ ಆರೋಗ್ಯಕರ ಸ್ಪರ್ಧೆ ಮಾತ್ರವಿದೆ ಎಂದು ಹೇಳಿದ್ದಾರೆ.

"ಲೋಕೇಶ್​ ಕನಕರಾಜ್​ ನನ್ನ ದೊಡ್ಡ ಅಭಿಮಾನಿ. ಇತ್ತೀಚೆಗಷ್ಟೇ ಅವರು ನನ್ನ ಸ್ನೇಹಿತ ರಜನಿಕಾಂತ್​ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಅನೇಕರು ವಿವಿಧ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಆದರೆ ಇವರಿಬ್ಬರೂ ಜೊತೆಯಾಗಿ ಸಿನಿಮಾ ಮಾಡುತ್ತಿರುವುದು ನನಗೆ ತುಂಬಾ ಹೆಮ್ಮೆ ತಂದಿದೆ. ಸುಮಾರು 15 ವರ್ಷಗಳ ಹಿಂದೆ 'ಕಮಲ್​ 50' ಎಂಬ ಕಾರ್ಯಕ್ರಮದಲ್ಲಿ ನಮ್ಮಿಬ್ಬರ ಸ್ನೇಹದ ಬಗ್ಗೆ ಮಾತನಾಡಿದ್ದೆ. ರಜನಿಕಾಂತ್​ ಮತ್ತು ಕಮಲ್​ ಹಾಸನ್​ ತುಂಬಾ ಒಳ್ಳೆಯ ಸ್ನೇಹಿತರು. ನಮ್ಮ ನಡುವೆ ಪೈಪೋಟಿ ಇತ್ತು. ಆದರೆ ಇದು ಹಗೆತನದಿಂದಲ್ಲ. ಬದಲಾಗಿ ತುಂಬಾ ಆರೋಗ್ಯಕರವಾಗಿತ್ತು. ಹಾಗಾಗಿಯೇ ನಾವಿಬ್ಬರು ಈ ಮಟ್ಟಕ್ಕೆ ಬಂದಿದ್ದೇವೆ" ಎಂದು ಕಮಲ್​ ಹಾಸನ್​ ಹೇಳಿದ್ದಾರೆ. ಸದ್ಯ ಈ ಕಾಮೆಂಟ್​ಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇದೇ ವೇಳೆ, ಖ್ಯಾತ ನಿರ್ದೇಶಕ ಮಣಿರತ್ನಂ ಜೊತೆಗಿನ ತಮ್ಮ ಮುಂದಿನ ಸಿನಿಮಾದ ಬಗ್ಗೆಯೂ ಕಮಲ್​ ಹಾಸನ್ ಮಾತನಾಡಿದ್ದಾರೆ. "ನಾಯಗನ್​ ಸಿನಿಮಾಕ್ಕಾಗಿ ನಾವು ಯಾವ ರೀತಿ ಕೆಲಸ ಮಾಡಿದ್ದೆವೋ, ಅದೇ ರೀತಿ ಈ ಚಿತ್ರಕ್ಕೂ ಕೆಲಸ ಮಾಡುತ್ತಿದ್ದೇವೆ. ಪ್ರೇಕ್ಷಕರನ್ನು ರಂಜಿಸುವುದೇ ನಮ್ಮ ಉದ್ದೇಶ. ನಾವು ಆ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಈ ಚಿತ್ರಕ್ಕಾಗಿ ಗಡ್ಡ ಬಿಡುತ್ತಿದ್ದೇನೆ" ಎಂದು ಹೇಳಿದ್ದಾರೆ.​

'ತಲೈವಾ 171': 'ಜೈಲರ್'​ ಸೂಪರ್​ ಹಿಟ್​ ಆದ ನಂತರ, ರಜನಿಕಾಂತ್​ ಅವರು ತಮ್ಮ 171ನೇ ಚಿತ್ರಕ್ಕಾಗಿ ಸನ್​ಪಿಕ್ಚರ್ಸ್​ ಜೊತೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ತಲೈವರ್​ 171 ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್​ ಕನಕರಾಜ್ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಶಾರುಖ್​ ಖಾನ್​ ನಟನೆಯ 'ಜವಾನ್'​ ಸಿನಿಮಾದ ಯಶಸ್ಸಿನಲ್ಲಿರುವ ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಅವರ ಮ್ಯೂಸಿಕ್​ನಲ್ಲಿ ​ತಲೈವರ್​ 171 ಹಾಡುಗಳು ಕೂಡ ಬರಲಿದೆ.

ಇದನ್ನೂ ಓದಿ:Thalaivar171: ಲೋಕೇಶ್​ ಕನಕರಾಜ್​ ಜೊತೆ ರಜನಿಕಾಂತ್ ಮುಂದಿನ ಸಿನಿಮಾ ಘೋಷಣೆ

ABOUT THE AUTHOR

...view details