ಹೈದರಾಬಾದ್:ಅದ್ಧೂರಿ ತಾರಾಗಣದಲ್ಲಿ ತಯಾರಾಗುತ್ತಿರುವ 'ಪ್ರಾಜೆಕ್ಟ್ ಕೆ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ಇದಾಗಿದ್ದು, ಅದ್ಧೂರಿ ಸೆಟ್ ಹಾಗೂ ತಾರೆಯರ ಸಮಾಗಮದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಂತಹ ಮೇರು ನಟರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗಾಗಲೇ ಎಲ್ಲರಿಗೆ ಗೊತ್ತಿರುವುದೆ! ಈ ಸ್ಟಾರ್ಗಳ ಪ್ರವೇಶದ ನಡುವೆ ಮತ್ತೊಬ್ಬ ಖ್ಯಾತ ನಟ ಸೇರಿಕೊಂಡಿದ್ದಾರೆ.
ಹೌದು, ನಟ ಕಮಲ್ ಹಾಸನ್ 'ಪ್ರಾಜೆಕ್ಟ್ - ಕೆ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆ ಪಾತ್ರ ಚಿತ್ರದ ಕೇಂದ್ರ ಬಿಂದು ಆಗಿರಲಿದ್ದು, ಕಮಲ್ ಹಾಸನ್ ಆಗಮನದಿಂದ ಚಿತ್ರವು ತಿರುವು ಪಡೆದುಕೊಳ್ಳಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಚಿತ್ರತಂಡ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೆಲವರು ಕಮಲ್ ಹಾಸನ್ ಅವರು 'ಪ್ರಾಜೆಕ್ಟ್-ಕೆ' ಚಿತ್ರದಲ್ಲಿ ಖಳ ನಟರಾಗಿ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳುತ್ತಿದ್ದರೆ, ಇನ್ನು ಕೆಲವು ನೆಟಿಜನ್ಸ್, ಅವರ ಪ್ರವೇಶವೇ ಒಂದು ಭಾಗ್ಯ, ಕಾದು ನೋಡಬೇಕು ಎಂದು ಹೇಳುತ್ತಿದ್ದಾರೆ.
'ಪ್ರಾಜೆಕ್ಟ್-ಕೆ' ಚಿತ್ರದಲ್ಲಿ ನಾಯಕ ನಟ ಪ್ರಭಾಸ್ ಜೊತೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಮುಂದಿನ ವರ್ಷ ಸಂಕ್ರಾಂತಿಗೆ ಉಡುಗೊರೆಯಾಗಿ ಪ್ರೇಕ್ಷಕರ ಮುಂದೆ ಬರಲಿದೆ. 'ಪ್ರಾಜೆಕ್ಟ್ ಕೆ' ಚಿತ್ರವನ್ನು ಹಿಂದೆಂದೂ ನೋಡಿರದ ಅದ್ಧೂರಿ ದೃಶ್ಯಗಳ ಮೂಲಕ ಮತ್ತು ಆ್ಯಕ್ಷನ್ ಥ್ರಿಲ್ಲರ್ ಆಗಿ ರೂಪಿಸುವ ತವಕದಲ್ಲಿದ್ದಾರೆ ನಿರ್ದೇಶಕ-ನಿರ್ಮಾಪಕರು.