ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಿಂದ ಹಿಡಿದು ಯುವ ನಟರವರೆಗೂ ಹೊಸ ಪ್ರತಿಭೆಗಳ ಸಿನಿಮಾಗಳಿಗೆ ಸಪೋರ್ಟ್ ಮಾಡುವ ಉತ್ತಮ ವಾತಾವರಣವಿದೆ. ಈ ಮಾತಿಗೆ ಪೂರಕವಾಗಿ ಯುವ ನಟ ಅರ್ಜುನ್ ನಗರ್ಕರ್ ಅಭಿನಯದ ಹಾಗೂ ರಾಮ್ ಪ್ರಸನ್ನ ಹುಣಸೂರು ನಿರ್ದೇಶನದ ಕಡಲೂರ ಕಣ್ಮಣಿ ಚಿತ್ರಕ್ಕೆ ಕಿಸ್ ಚಿತ್ರದ ನಟ ವಿರಾಟ್ ಸಾಥ್ ನೀಡಿದ್ದಾರೆ. ಕಡಲೂರ ಕಣ್ಮಣಿ ಚಿತ್ರದ ಟೀಸರ್ ಹಾಗು ಹಾಡುಗಳನ್ನು ನಟ ವಿರಾಟ್ ಅನಾವರಣ ಮಾಡುವ ಮೂಲಕ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಬಹುಭಾಷಾ ನಟಿ ನೇಹಾ ಸಕ್ಸೇನಾ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು ಮಾತನಾಡಿ, ಕಡಲೂರ ಕಣ್ಮಣಿ ಎಂದರೆ ವಜ್ರ ಎಂದು ನಾನು ಹಿಂದೆಯೇ ತಿಳಿಸಿದ್ದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ದಸರಾ ಹಬ್ಬಕ್ಕೆ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ವಿರಾಟ್ ಅವರಿಗೆ ಹಾಗೂ ಚಿತ್ರಕ್ಕೆ ಬಂಡಾವಳ ಹೂಡಿರುವ ನಿರ್ಮಾಪಕರಿಗೆ ನನ್ನ ಕೃತಜ್ಞತೆಗಳು ಎಂದರು.