ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ ಮಾಜಿ ಸ್ಪರ್ಧಿ ಶೃತಿ ಪ್ರಕಾಶ್ ಹಾಗು ಭರತ್ ಗೌಡ ಅಭಿನಯದ ಸಿನಿಮಾ ಕಡಲ ತೀರದ ಭಾರ್ಗವ. ಶೀರ್ಷಿಕೆಯ ಮೂಲಕವೇ ಮನೆಮಾತಾಗಿರುವ ಚಿತ್ರಕ್ಕಾಗಿ ಖ್ಯಾತ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿರುವ 'ಸಮಯವೇ' ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಕರಾವಳಿಯ ಆಕರ್ಷಕ ಪರಿಸರ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಇತ್ತೀಚೆಗೆ ಹಾಡು ಬಿಡುಗಡೆ ಆಗಿದ್ದು, ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಪನ್ನಗ ಸೋಮಶೇಖರ್, "ಕಡಲ ತೀರದ ಭಾರ್ಗವ ಎಂದು ಹಿರಿಯ ಸಾಹಿತಿ ಶಿವರಾಮ ಕಾರಂತರನ್ನು ಕರೆಯುತ್ತಾರೆ. ಅದರೆ ನಮ್ಮ ಚಿತ್ರದ ಕಥೆ ಅವರ ಬಗ್ಗೆ ಅಲ್ಲ. ಚಿತ್ರದಲ್ಲಿ ನಾಯಕನ ಹೆಸರು ಭಾರ್ಗವ. ನಾನು ಕಡಲತೀರವನ್ನು ಮನುಷ್ಯನ ಮನಸ್ಸಿಗೆ ಹೋಲಿಸುತ್ತೇನೆ. ಭಾರ್ಗವನ ಪಾತ್ರದಲ್ಲಿ ನಾಯಕನಾಗಿ ಭರತ್ ಗೌಡ, ಶೃತಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ. ಅನಿಲ್ ಸಿ.ಜೆ ಸಂಗೀತ ನೀಡಿರುವ ಆರು ಹಾಡುಗಳ ಪೈಕಿ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿ, ಜನಪ್ರಿಯವಾಗಿದೆ" ಎಂದರು.
ನಾಯಕ ನಟ ಭರತ್ ಗೌಡ ಮಾತನಾಡಿ, "ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂದು ಹೇಳುತ್ತಾರೆ. ಹಾಗೆ ಸಿನಿಮಾ ಮಾಡುವುದು ಸಹ ಅಷ್ಟು ಸುಲಭವಲ್ಲ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ನಾನು ಹಾಗೂ ವರುಣ್ ಪಟೇಲ್ ರಾಜು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ವರುಣ್ ಪಟೇಲ್ ರಾಜು ಅವರೂ ಈ ಸಿನಿಮಾದಲ್ಲಿ ಒಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ" ಎಂದು ಹೇಳಿದರು.