ಕನ್ನಡದಲ್ಲೀಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳೇ ಹೆಚ್ಚಾಗಿ ಬರುತ್ತಿವೆ. ಇಂತಹ ಸಾಲಿನಲ್ಲಿ ಉತ್ತಮ ಕಂಟೆಂಟ್ ಇರುವ ಮತ್ತೊಂದು ಚಿತ್ರ ಕಡಲ ತೀರದ ಭಾರ್ಗವ. ಸದ್ಯ ಪೋಸ್ಟರ್ ಹಾಗೂ ಹಾಡುಗಳಿಂದ ಸ್ಯಾಂಡಲ್ವುಡ್ನಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡುತ್ತಿರುವ ಚಿತ್ರವಿದು. ಕಡಲ ತೀರದ ಭಾರ್ಗವ ಅಂದಾಕ್ಷಣ ನಮಗೆ ಕಣ್ಮುಂದೆ ಬರೋದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರು. ಈ ಅನ್ವರ್ಥನಾಮವೇ ಇದೀಗ ಕನ್ನಡ ಚಿತ್ರಕ್ಕೆ ಶೀರ್ಷಿಕೆಯಾಗಿದೆ.
ಕಡಲ ತೀರದ ಭಾರ್ಗವ ಡಿಫರೆಂಟ್ ಲವ್ ರೊಮ್ಯಾಂಟಿಕ್ ಜಾನರ್ನ ಚಿತ್ರ. ಚಿತ್ರದ ಸ್ಟೋರಿ ಬಹುತೇಕ ಕರಾವಳಿ ತೀರದಲ್ಲೇ ನಡೆಯುವುದರಿಂದ ಚಿತ್ರಕ್ಕೆ 'ಕಡಲ ತೀರದ ಭಾರ್ಗವ' ಎಂದು ಟೈಟಲ್ ಇಡಲಾಗಿದೆ. ಅದನ್ನು ಹೊರತುಪಡಿಸಿ ಶಿವರಾಮ ಕಾರಂತರಿಗೂ ಈ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಲಂಡನ್ ಲಂಬೋದರ ಸಿನಿಮಾದ ಬಳಿಕ ಬಿಗ್‌ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಕಡಲ ತೀರದ ಭಾರ್ಗವ ಚಿತ್ರ ಮಾಡ್ತಾ ಇದ್ದಾರೆ. ಭರತ್ ಗೌಡ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಶ್ರುತಿ ಪ್ರಕಾಶ್ ನಡುವಿನ ಸುಮಧುರ ಹಾಡೊಂದು ಅನಾವರಣಗೊಂಡಿದೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಈ ಹಾಡು ಜನಪ್ರಿಯವಾಗಿದ್ದು, ಈಗಾಗಲೇ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಆರ್ಯನ್ ರೋಷನ್ ನೃತ್ಯ ನಿರ್ದೇಶಿಸಿರುವ "ಮಧುರ ಮಧುರ" ಹಾಡಿಗೆ ನಾಯಕ ಭರತ್ ಗೌಡ ಹಾಗೂ ನಾಯಕಿ ಶೃತಿ ಪ್ರಕಾಶ್ ಹೆಜ್ಜೆ ಹಾಕಿದ್ದಾರೆ. ಅನಿಲ್ ಸಿ.ಜೆ ಸಂಗೀತಕ್ಕೆ ಹಾಗೂ ಕೀರ್ತನ ಪೂಜಾರಿ ಅವರ ಛಾಯಾಗ್ರಹಣಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪಟೇಲ್ ವರುಣ್ ರಾಜು ಹಾಗೂ ಭರತ್ ಗೌಡ ನಿರ್ಮಿಸಿರುವ, ಪನ್ನಗ ಸೋಮಶೇಖರ್ ನಿರ್ದೇಶಿಸಿರುವ ಈ ಚಿತ್ರದ "ಮಧುರ ಮಧುರ" ಹಾಡು ಇತ್ತೀಚೆಗೆ ARC MUSIC ಮೂಲಕ ಬಿಡುಗಡೆಯಾಗಿದೆ. ಅನಿಲ್ ಸಿ.ಜೆ ಸಂಗೀತ ನೀಡಿರುವ ಹಾಡನ್ನು ವಾರಿಜಾಶ್ರೀ ಹಾಗೂ ಅನಿಲ್ ಸಿ.ಜೆ ಸುಶ್ರಾವ್ಯವಾಗಿ ಹಾಡಿದ್ದಾರೆ.
ಸದ್ಯದಲ್ಲೇ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಲಿದೆ. ಆನಂತರ ಟ್ರೇಲರ್ ಬರಲಿದೆ. ಟ್ರೇಲರ್ನಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗುವುದೆಂದು ನಿರ್ಮಾಪಕರು ತಿಳಿಸಿದ್ದಾರೆ. ಶ್ರೀಧರ್, ರಾಘವ್ ನಾಗ್, ಅಶ್ವಿನಿ ಹಾಸನ್ ಸೇರಿ ಹಲವರು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಸದ್ಯ ಹಾಡುಗಳಿಂದ ಚಂದನವನದಲ್ಲಿ ಸದ್ದು ಮಾಡುತ್ತಿರುವ ಕಡಲ ತೀರ ಭಾರ್ಗವ ಚಿತ್ರ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.
ರಿಯಾಲಿಟಿ ಶೋ ಬಿಗ್‌ಬಾಸ್ ಮೂಲಕ ಕನ್ನಡಿಗರಿಗೆ ಪರಿಚಿತರಾದ ಶ್ರುತಿ ಪ್ರಕಾಶ ಮೂಲತಃ ಬೆಳಗಾವಿ ಮೂಲದವರು. ಸದ್ಯ ಮುಂಬೈಯಲ್ಲಿ ನೆಲೆಸಿದ್ದಾರೆ. ನಟನೆ ಜೊತೆಗೆ ಅದ್ಭುತ ಗಾಯಕಿಯೂ ಆಗಿರುವ ಇವರು ಈ ಮೊದಲು ಆಲ್ಬಂ ಸಾಂಗ್ ಮೂಲಕ ಸೈ ಎನಿಸಿಕೊಂಡಿದ್ದಾರೆ. ಬಿಗ್ಬಾಸ್ನಲ್ಲಿ ಶೋದಿಂದಾಗಿ ಜನಪ್ರಿಯರಾದ ಬಳಿಕ ಕನ್ನಡ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಲಂಡನ್ನಲ್ಲಿ ಲಂಬೋದರ್ ಇವರ ಕನ್ನಡದ ಮೊದಲ ಸಿನಿಮಾ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಇದೀಗ 'ಕಡಲ ತೀರದ ಭಾರ್ಗವ' ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರ ಬಹುನಿರೀಕ್ಷೆ ಹುಟ್ಟಿಸಿದೆ.
ಇದನ್ನೂ ಓದಿ: ಆರ್ಆರ್ಆರ್ ಹೊಗಳಿದ ಅವತಾರ್ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್: ಪ್ರಪಂಚದ ಉತ್ತುಂಗದಲ್ಲಿದ್ದೇನೆ ಎಂದ ನಿರ್ದೇಶಕ ರಾಜಮೌಳಿ