ಕರ್ನಾಟಕ ಮಾತ್ರವಲ್ಲ, ಇಡೀ ಭಾರತಾದ್ಯಂತ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ" 2023 ರ ಮಾರ್ಚ್ 17 ಅಂದರೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ನಾಡಿನ ದೊಡ್ಡ ಹಬ್ಬವಾದ ಯುಗಾದಿ ಕೂಡ ಸಮೀಪದಲ್ಲಿರುವುದು ವಿಶೇಷ.
ಆರ್.ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಮುಖ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿರುವ "ಕಬ್ಜ" ಚಿತ್ರಕ್ಕೆ ಪುನೀತ್ ನೀಡುತ್ತಿದ್ದ ಪ್ರೋತ್ಸಾಹ ಅಪಾರವಾಗಿತ್ತು. ಚಿತ್ರದ ಕೆಲವು ತುಣುಕುಗಳನ್ನು ಅವರಿಗೆ ತೋರಿಸಿದಾಗ ಹಾಲಿವುಡ್ ಚಿತ್ರ ಇದ್ದ ಹಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದರು. ಸಹೃದಯಿ, ಅಭಿಮಾನಿಗಳ ಪಾಲಿಗಂತೂ ದೇವರೇ ಆಗಿರುವ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ದಿನ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ. ಪುನೀತ್ ಹುಟ್ಟುಹಬ್ಬ ಹಾಗೂ ಹೊಸವರ್ಷದ ಮೊದಲ ದಿನವಾದ ಯುಗಾದಿ ಹಬ್ಬದ ಸಮೀಪದಲ್ಲೇ ನಮ್ಮ ಚಿತ್ರ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ ಎಂದು ಶ್ರೀಸಿದ್ದೇಶ್ವರ ಎಂಟರ್‌ಪ್ರೈಸಸ್ ಸಂಸ್ಥೆ ತಿಳಿಸಿದೆ.
ಕಳೆದ ವರ್ಷ ಕನ್ನಡದ ಸಾಕಷ್ಟು ಚಿತ್ರಗಳು ಭರ್ಜರಿ ಯಶಸ್ಸು ಕಂಡು ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ನೋಡುವಂತಾಗಿತ್ತು. ಈಗ ಎಲ್ಲೆಡೆ ಅಷ್ಟೇ ಕುತೂಹಲದಿಂದ ಕಾಯುತ್ತಿರುವ ಹಾಗೂ ಐಎಂಡಿಬಿ 2023ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ "ಕಬ್ಜ"ದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಅಭಿಮಾನಿಗಳ ಕಾತುರಕ್ಕೆ ಕೊನೆಗೂ ಚಿತ್ರತಂಡದಿಂದ ಉತ್ತರ ಸಿಕ್ಕಿದೆ.
ಅದ್ಧೂರಿ ಮೇಕಿಂಗ್ನಿಂದ ಸದ್ದು ಮಾಡುತ್ತಿರುವ ಕಬ್ಜ 1960 ಹಾಗೂ 80ರಲ್ಲಿ ನಡೆಯುವ ಕಥೆಯಾದ್ದರಿಂದ ಬಹುದೊಡ್ಡ ತಾರಾ ಬಳಗವನ್ನು ಹೊಂದಿದೆ. ತೆಲುಗಿನ ಖ್ಯಾತ ನಟರಾರ ಪೊಸನಿ ಕೃಷ್ಣ ಮುರಳಿ ಮತ್ತು ಮುರಳಿ ಶರ್ಮಾ, ಐ ಮೂವಿ ಖ್ಯಾತಿ ಕಾಮರಾಜನ್, ನವಾಬ್ ಷಾ, ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಹೀಗೆ ದೊಡ್ಡ ಕಲಾವಿದರ ದಂಡೇ ಇದೆ.
ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್.ಚಂದ್ರು ಅವರೇ ನಿರ್ಮಿಸುತ್ತಿರುವ ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್ ಸಾಹಸ ನಿರ್ದೇಶನವಿದೆ.
ಇಂಥದ್ದೊಂದು ಕನ್ನಡ ಸಿನಿಮಾ ಬೃಹತ್ ಮಟ್ಟದಲ್ಲಿ ಮೂಡಿ ಬರುತ್ತಿರುವುದು ಕನ್ನಡ ಸಿನಿಮಾ ಅಭಿಮಾನಿಗಳಿಗೆ ಹೆಮ್ಮೆ. ಇಂಥ ಪ್ರಯತ್ನಗಳನ್ನು ಕನ್ನಡಿಗರು ಪ್ರಶಂಶಿಸುತ್ತಾರೆ. ಈಗ ಕಬ್ಜ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶಾದ್ಯಂತ ಚಿತ್ರ ಭರ್ಜರಿ ಬಿಡುಗಡೆಗೆ ಸಿದ್ಧಗೊಂಡಿದೆ. ಕೆಜಿಎಫ್ 1, 2, ಕಾಂತಾರ, 777 ಚಾರ್ಲಿ ಮತ್ತು ವಿಕ್ರಾಂತ್ ರೋಣ ಸಿನಿಮಾಗಳಂತೆ ಈ ಸಿನಿಮಾ ಕೂಡ ದೊಡ್ಡ ಯಶಸ್ಸು ಗಳಿಸಲಿ ಎಂಬುದು ಸಿನಿ ರಸಿಕರ ಆಶಯ.
ಇದನ್ನೂ ಓದಿ: 2022ರಲ್ಲಿ ಬಿಡುಗಡೆಯಾದ ಸ್ಯಾಂಡಲ್ವುಡ್ ಪ್ಯಾನ್ ಇಂಡಿಯಾ ಚಿತ್ರಗಳ ಡೀಟೆಲ್ಸ್ ನಿಮಗಾಗಿ..