ವರನಟ ಡಾ. ರಾಜ್‌ಕುಮಾರ್ ಅವರ ಮಾತಿನಂತೆ ಒಂದು ಸಿನಿಮಾ ಬಂದರೆ ಸಾವಿರಾರು ತಂತ್ರಜ್ಞರು, ಕಲಾವಿದರಿಗೆ ಕೈ ತುಂಬಾ ಕೆಲಸ ಸಿಗುತ್ತದೆ. ಈಗಂತೂ ಪ್ಯಾನ್ ಇಂಡಿಯಾ ಸಿನಿಮಾ ಜಮಾನ. ಒಂದು ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಯಾದರೆ ಒಂದು ಸಿನಿಮಾದಿಂದ ಲಕ್ಷಾಂತರ ಜನರಿಗೆ ಕೆಲಸ ಸಿಗುತ್ತದೆ. ಈ ಮಾತನ್ನು ಕನ್ನಡದ ಕಬ್ಜ ನಿಜ ಮಾಡಿದೆ. ಕಬ್ಜ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಕಬ್ಜ ವಿಶ್ವಾದ್ಯಂತ ಬಿಡುಗಡೆಯಾಗಿ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ₹54 ಕೋಟಿ ಗಳಿಕೆ ಮಾಡಿತ್ತು. ಆದರೆ ಎರಡೇ ದಿನಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಎರಡನೇ ದಿನ ಮಾಡಿದ ದಾಖಲೆಯ ಬಗ್ಗೆ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ ಖುಷಿಪಟ್ಟಿದೆ. ಚಿತ್ರದ ಯಶಸ್ಸಿನ ಖುಷಿಯಲ್ಲಿ ಉಪೇಂದ್ರ ಇದ್ರೆ, ಸಾಧಿಸಿದೆ ಎಂಬ ಛಲದಲ್ಲಿ ನಿರ್ಮಾಪಕ ಹಾಗು ನಿರ್ದೇಶಕ ಆರ್.ಚಂದ್ರು ಇದ್ದಾರೆ.
ಖಾಸಗಿ ಹೊಟೇಲ್‌ನಲ್ಲಿ ನಡೆದ ಸಕ್ಸಸ್ ಮೀಟ್‌ನಲ್ಲಿ ಉಪೇಂದ್ರ, ಆರ್.ಚಂದ್ರು, ವಿತರಕರಾದ ಮೋಹನ್, ಚಂದ್ರು, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ನಟರಾದ ಬಿ.ಸುರೇಶ್, ಅನೂಪ್ ರೇವಣ್ಣ, ತಮಿಳು ನಟ ಕಾಮರಾಜನ್, ನೀನಾಸಂ ಅಶ್ವತ್, ಕೋಟೆ ಪ್ರಭಾಕರ್, ಪೋಷಕ ನಟಿಯರಾದ ಶೋಭಾ ರಾಘವೇಂದ್ರ ಸೇರಿದಂತೆ ಸಿನಿಮಾ ತಂಡ ಭಾಗಿಯಾಗಿತ್ತು.
ನಿರ್ದೇಶಕ ಆರ್.ಚಂದ್ರು ಮಾತನಾಡಿ, "ಈ ಸಿನಿಮಾ ಆಗಲು ಮುಖ್ಯ ಕಾರಣ ಉಪೇಂದ್ರ ಸಾರ್. ಪುನೀತ್ ರಾಜ್‍ಕುಮಾರ್ ಸಾರ್ ನನ್ನ ಸಿನಿಮಾ ಚಿತ್ರೀಕರಣದ ಸೆಟ್ಗೆ ಬಂದು ಹಾಲಿವುಡ್ ಶೈಲಿಯ ಮೇಕಿಂಗ್ ಮಾಡ್ತಾ ಇದ್ಯಾ ಚಂದ್ರು ಎಂದು ಹೇಳಿದಾಗಲೇ ನಾನು ಮೊದಲು ಗೆದ್ದೆ. ಎರಡನೇಯದು ನನ್ನ ಸಿನಿಮಾ ಮೇಕಿಂಗ್ ತೋರಿಸಿ ಟಿವಿ ಹಾಗು ಡಿಜಿಟಲ್ ರೈಟ್ಸ್ ಮಾರಾಟ ಮಾಡಿದಾಗ ಎರಡನೇ ಗೆಲುವು. ಈಗ ವಿಶ್ವಾದ್ಯಂತ ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡ್ತಿರೋದು ನನ್ನ ಮೂರನೇ ಗೆಲುವು" ಎಂದರು.