ಮುಂಬೈ (ಮಹಾರಾಷ್ಟ್ರ): ಜೂನಿಯರ್ ಮೆಹಮೂದ್ ಎಂದೇ ಖ್ಯಾತರಾಗಿದ್ದ ನಟ ನಯೀಮ್ ಸಯ್ಯದ್ ನಿನ್ನೆ (ಗುರುವಾರ) ರಾತ್ರಿ 2 ಗಂಟೆಗೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಹೊಟ್ಟೆಯ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಜೂನಿಯರ್ ಮೆಹಮೂದ್ ಅವರಿಗೆ 67 ವರ್ಷ ವಯಸ್ಸಾಗಿತ್ತು. ಹೊಟ್ಟೆಯ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದಾಗ ಅವರು ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಇಂದು (ಶುಕ್ರವಾರ) ಮಧ್ಯಾಹ್ನದ ಅಂತಿಮ ನಮನ ಸಲ್ಲಿಸಿದ ನಂತರ, ಸಾಂತಾಕ್ರೂಜ್ ಸಮಾಧಿ ಮೈದಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಸ್ನೇಹಿತರು ಖಚಿತಪಡಿಸಿದ್ದಾರೆ. ಹಾಸ್ಯನಟನಾಗಿ ಜೂನಿಯರ್ ಮೆಹಮೂದ್ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಅವರ ಮರಣದ ನಂತರ, ಸಿನಿಮಾ ರಂಗದವರಲ್ಲಿ ಮೌನ ಆವರಿಸಿದೆ.
ಜ್ಯೂನಿಯರ್ ಮಹಮೂದ್ ಅವರ ಪುತ್ರ ಹಸ್ನೈನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ''18 ದಿನಗಳ ಹಿಂದೆಯಷ್ಟೇ ತಂದೆಯವರ ಹೊಟ್ಟೆಯ ಕ್ಯಾನ್ಸರ್ ನಾಲ್ಕನೇ ಹಂತಕ್ಕೆ ತಲುಪಿರುವ ಬಗ್ಗೆ ನಮಗೆ ತಿಳಿದಿತ್ತು. ಅವರನ್ನು ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಈ ಹಂತದಲ್ಲಿ ಚಿಕಿತ್ಸೆಯ ಜೊತೆಗೆ ಕೀಮೋಥೆರಪಿ ಮಾಡಿಸಲಾಗಿದೆ ಎಂದು ಅವರು ತಿಳಿಸಿದರು.