ಹೆತ್ತವರ ಪ್ರೀತಿಯನ್ನು ವರ್ಣಿಸಲು ಪದಗಳು ಸಾಲದು. ಆ ಪ್ರೀತಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅದರಲ್ಲೂ ತಾಯಿಗೆ ಮಗನ ಮೇಲೆ, ತಂದೆಗೆ ಮಗಳ ಮೇಲೆ ಮಮತೆ ಕೊಂಚ ಹೆಚ್ಚೇ. ಇಂಥದ್ದೇ ಬಾಂಧವ್ಯ ಒಳಗೊಂಡಿರುವ ಹಾಡು ಈಗ ಸ್ಯಾಂಡಲ್ವುಡ್ನಲ್ಲಿ ಅನುರಣಿಸುತ್ತಿದೆ. ಪ್ರೇಮಂ ಪೂಜ್ಯಂ ಸಿನಿಮಾ ಖ್ಯಾತಿಯ ಬೃಂದಾ ಆಚಾರ್ಯ ಮುಖ್ಯ ಭೂಮಿಕೆಯಲ್ಲಿರುವ ಜೂಲಿಯೆಟ್ 2 ಚಿತ್ರದ ಹಾಡು ಇದಾಗಿದೆ.
ಕೆಲ ದಿನಗಳ ಹಿಂದೆ ಅಶ್ವಿನಿ ಪುನೀತ್ ರಾಜ್ಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದರು. ಇದರ ಬೆನ್ನಲ್ಲೇ ಚಿತ್ರತಂಡ ತಂದೆ ಮತ್ತು ಮಗಳ ಬಾಂಧವ್ಯದ ಹಾಡೊಂದನ್ನು ಬಿಡುಗಡೆ ಮಾಡಿತ್ತು. ವಿಭಿನ್ನ ಕಥಾಹಂದರ ಹೊಂದಿರುವ ಜ್ಯೂಲಿಯೆಟ್ 2 ಚಿತ್ರದ ತಂದೆ ಮಗಳ ಬಾಂಧವ್ಯವನ್ನು ಸಾರುವ ಹಾಡು ಕೇಳುಗರ ಮನ ಕರಗಿಸಿದೆ. ಬೆವರ ಹನಿಯ ಒಡಲಿನಲಿ ತಂದೆಯ ಸಹನೆ ಲಾಲಿ ಹಾಡುತ್ತೆ ಎಂಬ ಹಾಡು (ನೆನಪಿಲ್ಲಿ ಈಗ ಹಾಡು) ಬಿಡುಗಡೆಯಾಗಿ ಒಂದು ಮಿಲಿಯನ್ ವೀಕ್ಷಣೆ ಪಡೆದಿದೆ.
ಪೋಷಕರನ್ನು ಬಣ್ಣಿಸುವ ಕೆಲ ಹಾಡುಗಳು ಈಗಾಗಲೇ ಬಂದಿವೆ. ಕೆಲ ವರ್ಷಗಳ ಹಿಂದೆ ಬಂದ ಅಪ್ಪಾ ಐ ಲವ್ ಯೂ ಪಾ ಹಾಡು ಸೂಪರ್ ಹಿಟ್ ಆಗಿತ್ತು. ಈ ಹಾಡಿನ ಬಳಿಕ ಇದೀಗ ಜೂಲಿಯಟ್ 2 ಚಿತ್ರದ ಅಪ್ಪ ಮಗಳ ಹಾಡು ಸ್ಯಾಂಡಲ್ವುಡ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಯುವ ಪ್ರತಿಭೆ ಸುಕೀರ್ತ್ ಶೆಟ್ಟಿ ಬರೆದ ಸಾಹಿತ್ಯಕ್ಕೆ, ಸಂಗೀತ ನಿರ್ದೇಶಕ ಸಂದೀಪ್ ಆರ್.ಬಲ್ಲಾಳ್ ಕ್ಯಾಚೀ ಟ್ಯೂನ್ ಹಾಕಿದ್ದಾರೆ. ಮಲ್ಲಿಕಾ ಮಟ್ಟಿ ಇಂಪಾಗಿ ಹಾಡಿದ್ದಾರೆ. ಮಗಳ ಪಾತ್ರದಲ್ಲಿ ರಕ್ಷಿತಾ ಬೋಳಾರ್ ಹಾಗೂ ತಂದೆಯ ಪಾತ್ರದಲ್ಲಿ ಲಕ್ಷ್ಮೀಶ್ ಭಟ್ ಸೊಗಸಾಗಿ ನಟಿಸಿದ್ದಾರೆ.