ಬ್ಲ್ಯಾಕ್ ಅಂಡ್ ವೈಟ್ ಕಾಲದಿಂದಲೂ ಕನ್ನಡ ಚಿತ್ರರಂಗದಲ್ಲಿ ಕಾದಂಬರಿ ಆಧಾರಿತ ಚಿತ್ರಗಳು, ಅಪ್ಪ ಮಗಳ ಬಾಂಧವ್ಯದ ಕಥೆಗಳು, ಭಾವನಾತ್ಮಕ ಕಥೆಗಳು, ಈ ಕಥೆಗೆ ತಕ್ಕ ಹಾಡುಗಳು ಕನ್ನಡ ಸಿನಿಮಾರಂಗದ ಶಕ್ತಿ ಬಗ್ಗೆ ಮಾತನಾಡುತ್ತವೆ. ಅಪ್ಪ ಅಮ್ಮನ ಕುರಿತಾಗಿ ಈಗಾಗಲೇ ಸಾಕಷ್ಟು ಹಾಡುಗಳು ಬಂದಿವೆ. ಕೆಲ ವರ್ಷಗಳ ಹಿಂದೆ ಬಂದ ಅಪ್ಪಾ.. ಐ ಲವ್ ಯೂ ಪಾ ಹಾಡು ಸೂಪರ್ ಹಿಟ್ ಆಗಿತ್ತು. ಈ ಹಾಡಿನ ಬಳಿಕ ಇದೀಗ ಅಪ್ಪ ಮಗಳ ಬಾಂಧವ್ಯದ ಮತ್ತೊಂದು ಹಾಡು ಸ್ಯಾಂಡಲ್ವುಡ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅದುವೇ ಜೂಲಿಯೆಟ್ 2 ಸಿನಿಮಾದ ಅಪ್ಪ ಮಗಳ ಹಾಡು.
ಪ್ರೇಮಂ ಪೂಜ್ಯಂ ಚಿತ್ರದ ನಾಯಕಿ ಬೃಂದಾ ಆಚಾರ್ಯ ಮುಖ್ಯ ಭೂಮಿಕೆಯಲ್ಲಿರೋ ಚಿತ್ರ ಜೂಲಿಯೆಟ್ 2. ಸದ್ಯ ಟೀಸರ್ನಿಂದಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಚಿತ್ರವಿದು. ಇದೀಗ ಜೂಲಿಯೆಟ್ 2 ಚಿತ್ರದ 'ನೆನಪಿಲ್ಲಿ ಈಗ' ಎಂಬ ಹಾಡು ಇತ್ತೀಚೆಗೆ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿ ಲಕ್ಷಾಂತರ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಜೂಲಿಯೆಟ್ 2 ಚಿತ್ರದ ಈ ಹಾಡಿನ ಬೊಂಬಾಟ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿದೆ.
ಸುಕೃತ್ ಶೆಟ್ಟಿ ಈ ಹಾಡಿನ ಸಾಹಿತ್ಯ ಬರೆದಿದ್ದು, ಮಲ್ಲಿಕಾ ಮಟ್ಟಿ ಬಹಳ ಸೊಗಸಾಗಿ ಹಾಡಿದ್ದಾರೆ. ಕ್ಯಾಮರಾಮ್ಯಾನ್ ಶ್ಯಾಂಟೋ ವಿ ಆಂಟೋ ಬಹಳ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ಅಪ್ಪ ಮಗಳ ಈ ಹಾಡು ಕೇಳುಗರ, ನೋಡುಗರ ಎದೆ ಭಾರವಾಗಿಸುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರಗಳು ಸೌಂಡ್ ಮಾಡುತ್ತಿವೆ. ಕಥೆ ಹಾಗೂ ಮೇಕಿಂಗ್ ವಿಚಾರದಲ್ಲಿ ಕನ್ನಡ ಚಿತ್ರಗಳದ್ದೇ ಮೇಲುಗೈ. ಅಂಥಹದ್ದೇ ಕಂಟೆಂಟ್ ಹೊಂದಿರುವ ಚಿತ್ರ ಜೂಲಿಯೆಟ್ 2 ಬಿಡುಗಡೆಗೆ ಸಜ್ಜಾಗುತ್ತಿದೆ. ಪ್ರೇಮಂ ಪೂಜ್ಯಂ ಚಿತ್ರದ ಬಳಿಕ ಬೃಂದಾ ಆಚಾರ್ಯ ಅಭಿನಯಿಸಿರೋ ಥ್ರಿಲ್ಲರ್ ಸಿನಿಮಾ ಇದು.