ಮಂಗಳೂರು (ದಕ್ಷಿಣ ಕನ್ನಡ):ಕರಾವಳಿ ತಂಡವೊಂದು ಕನ್ನಡ ಸಿನಿಮಾ ರಂಗದಲ್ಲಿ ಹೊಸ ಪ್ರಯೋಗ ಮಾಡಲು ಸಂಪೂರ್ಣ ಸಜ್ಜಾಗಿದೆ. ಜೂಲಿಯೆಟ್ 2 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ಎರಡನೇ ಭಾಗವನ್ನು ಮೊದಲು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ. ಲಿಕಿತ್ ಆರ್ ಕೋಟ್ಯಾನ್ ನಿರ್ಮಾಣದ, ವಿರಾಟ್ ಬಿ ಗೌಡ ನಿರ್ದೇಶನದ ಮೊದಲ ಸಿನಿಮಾದಲ್ಲಿ ಈ ಪ್ರಯೋಗ ಮಾಡಲಾಗಿದೆ. ಜೂಲಿಯೆಟ್ 2 ಸಿನಿಮಾ ಇದೇ ಫೆಬ್ರವರಿ 24ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ಐದು ಭಾಷೆಯಲ್ಲಿ ನಿರ್ಮಾಣವಾಗಿದ್ದು, ಮೊದಲಿಗೆ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಸದ್ಯ ಸಿನಿಮಾ ಪ್ರಚಾರ ಕಾರ್ಯದಲ್ಲಿ ಜೂಲಿಯೆಟ್ 2 ಚಿತ್ರ ತಂಡ ಬ್ಯುಸಿಯಾಗಿದೆ.
ಜೂಲಿಯೆಟ್ 1 ಶೂಟಿಂಗ್: ಜೂಲಿಯೆಟ್ 2 ಸಿನಿಮಾ ಟೈಟಲ್ ಕೇಳಿದಾಕ್ಷಣ ಅಥವಾ ನೋಡಿದಾಕ್ಷಣ ಇದಕ್ಕೂ ಮೊದಲು ಜೂಲಿಯೆಟ್ 1 ಬಂದಿದೆಯೇ? ಎಂಬ ಪ್ರಶ್ನೆ ಬರುತ್ತದೆ. ಸಾಮಾನ್ಯವಾಗಿ ಎಲ್ಲ ಸಿನಿಮಾಗಳು ತಮ್ಮ ಮೊದಲ ಭಾಗವನ್ನು ಬಿಡುಗಡೆ ಮಾಡಿದ ಬಳಿಕ ಎರಡನೇ ಭಾಗವನ್ನು ಬಿಡುಗಡೆ ಮಾಡುತ್ತದೆ. ಆದರೆ, ಜೂಲಿಯೆಟ್ ಸಿನಿಮಾದಲ್ಲಿ ಈ ವಿಚಾರ ಭಿನ್ನವಾಗಿದೆ. ಜೂಲಿಯೆಟ್ 2 ಮೊದಲು ಬಿಡುಗಡೆ ಆಗುತ್ತಿದ್ದು, ಜೂಲಿಯೆಟ್ 1ರ ಚಿತ್ರೀಕರಣ ಇನ್ನಷ್ಟೇ ಪೂರ್ಣವಾಗಬೇಕಾಗಿದೆ. ಜೂಲಿಯೆಟ್ 1 ಶೂಟಿಂಗ್ ಶೇ.30 ರಷ್ಟು ಮುಗಿದಿದೆ. ಇದು ಸ್ಯಾಂಡಲ್ವುಡ್ನಲ್ಲಿ ನಡೆದ ಮೊದಲ ಪ್ರಯೋಗವಾಗಿದೆ.
ಜೂಲಿಯೆಟ್ 2 ಶೂಟಿಂಗ್:ಜೂಲಿಯೆಟ್ 2 ಚಿತ್ರೀಕರಣ ಕರಾವಳಿಯಲ್ಲಿ ನಡೆದಿದೆ. ಇದರ ಶೇ. 80ಕ್ಕೂ ಅಧಿಕ ಭಾಗ ಅರಣ್ಯ ಪ್ರದೇಶದಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಜೂರು ಭಾಗದಲ್ಲಿ ಹೆಚ್ಚಿನ ಶೂಟಿಂಗ್ ನಡೆದಿದೆ.
ಜೂಲಿಯೆಟ್ 2 ಕಥೆ: ಈ ಚಿತ್ರದಲ್ಲಿ ರೋಮಿಯೋ ಇಲ್ಲ. ಕಥೆಯೇ ನಾಯಕನಾಗಿರುವ ಈ ಸಿನಿಮಾ ಸ್ವತಂತ್ರ ಮಹಿಳೆಯೊಬ್ಬಳ ಸುತ್ತ ಸುತ್ತತ್ತದೆ. ತನ್ನ ಬದುಕಿನ ಕತ್ತಲೆಯ ಬಾಗಿಲುಗಳನ್ನು ಮೀರಿ ನಿರ್ದಯ ಮತ್ತು ಘೋರ ಯುದ್ಧಗಳನ್ನು ನಡೆಸುತ್ತಾಳೆ. ಮಹಿಳಾ ಸಬಲೀಕರಣ ಮತ್ತು ಸಮಾಜದಲ್ಲಿನ ಅಮಾನವೀಯತೆಯ ವಿರುದ್ಧದ ಹೋರಾಟದ ಪರಿಕಲ್ಪನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾ: ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡರೆ, ಅನೂಪ್ ಸಾಗರ್, ಕುಶ್ ಆಚಾರ್ಯ, ರಾಯ್ ಮತ್ತು ಶ್ರೀಕಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ಚಿತ್ರ ರಿಲೀಸ್ ಆಗಲಿದೆ. ಇದರ ಡಿಸ್ಟ್ರಿಬ್ಯೂಷನ್ ಜವಾಬ್ದಾರಿಯನ್ನು ರಿಲಯನ್ಸ್ ಸಂಸ್ಥೆ ವಹಿಸಿಕೊಂಡಿದ್ದು, ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಲಿದೆ. ಬಳಿಕ ಉಳಿದ ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ.