ಹೈದರಾಬಾದ್: ತೆಲುಗಿನ ಜನಪ್ರಿಯ ನಟ ಜೂನಿಯರ್ ಎನ್‌ಟಿಆರ್ ಅವರು ಮಂಗಳವಾರ ಜಪಾನ್‌ನಿಂದ ಮನೆಗೆ ಮರಳಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಭೂಕಂಪದ ಬಗ್ಗೆ ಪ್ರಸ್ತಾಪಿಸಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
"ಜಪಾನ್‌ನಿಂದ ಇಂದು ಮನೆಗೆ ಹಿಂತಿರುಗಿದೆ. ಭೂಕಂಪಗಳು ಅಪ್ಪಳಿಸಿದ್ದರಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ. ಕಳೆದ ವಾರವನ್ನು ಪೂರ್ತಿಯಾಗಿ ಅಲ್ಲಿಯೇ ಕಳೆದೆ. ನನ್ನ ಹೃದಯ ಅಲ್ಲಿನ ಬಾಧಿತರಾಗಿ ಮಿಡಿಯುತ್ತಿದೆ" ಎಂದಿದ್ದಾರೆ.
ಹೊಸ ವರ್ಷದ ಮೊದಲ ದಿನವೇ ಜಪಾನ್ ಭೀಕರ ಪ್ರಕೃತಿ ವಿಕೋಪಕ್ಕೆ ತುತ್ತಾಯಿತು. ನೋಟೋ ಪೆನಿನ್ಸುಲಾದಲ್ಲಿ 24 ಜನರು ಮರಣಿಸಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಮುದ್ರದಲ್ಲಿ ದೊಡ್ಡ ಅಲೆಗಳ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಕರಾವಳಿ ಪ್ರದೇಶದ ಜನರು ಸುರಕ್ಷಿತವಾಗಿರಲು ಸೂಚಿಸಲಾಗಿದೆ.
ಸಿನಿಮಾ ಹಾಗೂ ಕುಟುಂಬಕ್ಕೆ ಜೂನಿಯರ್ ಎನ್‌ಟಿಆರ್ ಸಮಾನವಾಗಿ ಸಮಯ ವಿನಿಯೋಗಿಸುತ್ತಿರುತ್ತಾರೆ. ಶೂಟಿಂಗ್ನಿಂದ ವಿರಾಮ ತೆಗೆದುಕೊಂಡು ಕುಟುಂಬದೊಂದಿಗೆ ವಿದೇಶಿ ಪ್ರವಾಸಗಳನ್ನು ಆಗಾಗ್ಗೆ ಮಾಡುತ್ತಿರುತ್ತಾರೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಮಯದಲ್ಲಿ ನಟ ಪತ್ನಿ ಲಕ್ಷ್ಮಿ ಪ್ರಣತಿ ಮತ್ತು ಇಬ್ಬರು ಮಕ್ಕಳಾದ ಅಭಯ್, ಭಾರ್ಗವ್ ಅವರೊಂದಿಗೆ ಜಪಾನ್‌ಗೆ ತೆರಳಿದ್ದರು.
ಜಪಾನ್‌ನಲ್ಲಿ ಆರ್‌ಆರ್‌ಆರ್ ಹಿಟ್: ಆಸ್ಕರ್ ವಿಜೇತ ಸಿನಿಮಾ ಆರ್‌ಆರ್‌ಆರ್ ಜಪಾನ್ ಭಾಷೆಗೆ ಡಬ್ಬಿಂಗ್ ಆಗಿ ಹಿಟ್ ಆಗಿತ್ತು. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. 2022ರಲ್ಲಿ ಜಪಾನ್‌ನಲ್ಲಿ ಬಿಡುಗಡೆಯಾದ ನಂತರ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಲನಚಿತ್ರವಾಗಿಯೂ ಹೊರಹೊಮ್ಮಿದೆ. ಎಸ್‌ಎಸ್ ರಾಜಮೌಳಿ ನಿರ್ದೇಶನವು ಜಪಾನೀಸ್ ಬಾಕ್ಸ್ ಆಫೀಸ್‌ನಲ್ಲಿ 410 ಮಿಲಿಯನ್ ಯೆನ್ (ಅಂದಾಜು 24.13 ಕೋಟಿ ರೂ.) ಕಲೆಕ್ಷನ್ ಮಾಡಿತ್ತು.
ಸದ್ಯ ಜೂ. ಎನ್‌ಟಿಆರ್ ಕೊರಟಾಲ ಶಿವ ನಿರ್ದೇಶನದ 'ದೇವರ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಜನವರಿ 1ರಂದು ಹೊಸ ಪೋಸ್ಟರ್ ಅನಾವರಣಗೊಳಿಸಿರುವ ಚಿತ್ರ ತಂಡ ಮತ್ತು ಜನವರಿ 8ರಂದು ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಚಿತ್ರದ ಪೋಸ್ಟರ್ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮೊದಲ ಭಾಗವು ಏಪ್ರಿಲ್ 5ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಜಾನ್ವಿ ಕಪೂರ್ ನಾಯಕಿಯಾಗಿದ್ದು, ಇದು ಅವರ ತೆಲುಗಿನ ಮೊದಲ ಚಿತ್ರ. ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ:'ಕಾಟೇರ' ಪೈರಸಿ ಮಾಡಿದರೆ ಸ್ಪೆಷಲ್ ಟ್ರೀಟ್‌ಮೆಂಟ್: ನಟ ದರ್ಶನ್ ಎಚ್ಚರಿಕೆ