ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ 'ಆರ್ಆರ್ಆರ್'ನ ನಾಯಕ ನಟ ಜೂನಿಯರ್ ಎನ್ಟಿಆರ್ ಅಭಿಮಾನಿಗಳಿಗೆ ಸಿಹಿ ಸುದ್ದಿ. ಜೂನಿಯರ್ ಎನ್ಟಿಆರ್ ತಮ್ಮ 31ನೇ ತೆಲುಗು ಚಿತ್ರವನ್ನು ಘೋಷಿಸಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕನ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಲಿದೆ.
ಹೌದು, ಈ ಮೊದಲೇ ವರದಿ ಮಾಡಿದಂತೆ ಜೂನಿಯರ್ ಎನ್ಟಿಆರ್ ಅವರ 31ನೇ ಸಿನಿಮಾವನ್ನು ಮೆಗಾ ಬ್ಲಾಕ್ ಬಸ್ಟರ್ ಚಿತ್ರಗಳಾದ 'ಕೆಜಿಎಫ್', 'ಕೆಜಿಎಫ್ 2' ಮತ್ತು ಬಿಡುಗಡೆಗೆ ಸಜ್ಜಾಗಿರುವ 'ಸಲಾರ್' ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ. ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ಜೊತೆ ಟಾಲಿವುಡ್ ಸೂಪರ್ ಸ್ಟಾರ್ ಕೈ ಜೋಡಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಆಗಲಿದ್ದು, ಇಂದು ಸಿನಿಮಾ ಆರಂಭದ ಕುರಿತು ಘೋಷಣೆ ಆಗಿದೆ. 2024ರ ಏಪ್ರಿಲ್ನಲ್ಲಿ ಸಿನಿಮಾ ಸೆಟ್ಟೇರಲಿದೆ. ಶೀರ್ಷಿಕೆ ಸೇರಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಲಾರ್ ಸಲುವಾಗಿ ಸುದ್ದಿಯಲ್ಲಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮುಖ್ಯಭೂಮಿಕೆಯ 'ಸಲಾರ್' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಚಿತ್ರ ಡಿಸೆಂಬರ್ 22ರಂದು ವಿಶ್ವಾದ್ಯಂತ ಥಿಯೇಟರ್ಗಳಲ್ಲಿ ಬಿಡುಗಡೆ ಆಗಲಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅಭಿನಯದ ಡಂಕಿ ಚಿತ್ರಕ್ಕೆ ಪೈಪೋಟಿ ನೀಡಲಿದ್ದಾರೆ. ಹೌದು, ಡಂಕಿ ಕೂಡ ಡಿಸೆಂಬರ್ 22 ರಂದು ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗಿದೆ.
2014ರಲ್ಲಿ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಪ್ರಶಾಂತ್ ನೀಲ್, 2018ರಲ್ಲಿ ಬಿಡುಗಡೆಯಾದ 'ಕೆಜಿಎಫ್ ಚಾಪ್ಟರ್ 1' ಮೂಲಕ ಹೆಚ್ಚು ಜನಪ್ರಿಯರಾದರು. ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 1' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಐದು ವರ್ಷಗಳ ನಂತರ, 2022ರಲ್ಲಿ ಬಂದ ಕೆಜಿಎಫ್ 2 ಚಿತ್ರ ವಿಶ್ವಾದ್ಯಂತ 1,200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಚಿತ್ರಗಳ ಮೂಲಕ ಪ್ರಶಾಂತ್ ನೀಲ್, ರಾಕಿಂಗ್ ಸ್ಟಾರ್ ಯಶ್ ಜನಪ್ರಿಯತೆ ನೂರು ಪಟ್ಟು ಹೆಚ್ಚಾಯಿತು. ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದ ಸಿನಿಮಾಗಳಿವು. ನೀಲ್ ಅವರ ಅದ್ಭುತ ಕೆಲಸ ನೋಡಿ ಜೂನಿಯರ್ ಎನ್ಟಿಆರ್ ಕೈ ಜೋಡಿಸಿದ್ದಾರೆ. ಎನ್ಟಿಆರ್ 31 ಸಿನಿಮಾ ಹೈ ಆ್ಯಕ್ಟೇನ್ ಚಿತ್ರವಾಗಲಿದೆ ಎಂಬುದು ಚಿತ್ರತಂಡ ಮತ್ತು ಅಭಿಮಾನಿಗಳ ವಿಶ್ವಾಸ.