ನಟ ಜೂನಿಯರ್ ಎನ್‌ಟಿಆರ್ ಮತ್ತು ಕೊರಟಾಲ ಶಿವ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಟಾಲಿವುಡ್ನ ಬಹುನಿರೀಕ್ಷಿತ 'ದೇವರ' ಚಿತ್ರತಂಡ ಹೊಸ ವರ್ಷದ ದಿನದ ನಿಮಿತ್ತ ತಮ್ಮ ಅಭಿಮಾನಿಗಳಿಗಾಗಿ ಅಪ್ಡೇಟ್ ನೀಡಿದೆ. ಚಿತ್ರತಂಡ ಇತ್ತೀಚಿಗಷ್ಟೇ ಎನ್‌ಟಿಆರ್ ಅವರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕುತೂಹಲ ಹೆಚ್ಚಿಸಿತ್ತು. ಇದೀಗ ಚಿತ್ರದ ಗ್ಲಿಂಪ್ಸ್ ವಿಡಿಯೋವನ್ನು ಜನವರಿ 8ರಂದು ಬಿಡುಗಡೆ ಮಾಡುವುದಾಗಿ ಘೋಷಿಸುವ ಮೂಲಕ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಹಾಗಾಗಿ ದಿನದಿನಕ್ಕೆ ಸಿನಿರಸಿಕರ ನಿರೀಕ್ಷೆ ಸಹಜವಾಗಿ ದುಪ್ಪಟ್ಟಾಗುತ್ತಿದೆ. ಜೂ.ಎನ್‌ಟಿಆರ್ ಕೂಡ ಎಕ್ಸ್ ಖಾತೆಯ ಮೂಲಕ ಖಚಿತಪಡಿಸಿದ್ದಾರೆ. ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಾ, ಜನವರಿ 8ರಂದು ಚಿತ್ರದ ಗ್ಲಿಂಪ್ಸ್ ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಚಿತ್ರವನ್ನು ಎರಡು ಕಂತುಗಳಾಗಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದು ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಸಹ ಮಾಡಿಕೊಂಡಿದೆ. ಮೊದಲನೇ ಭಾಗ ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಮುಗಿದಿದೆ. "ದೇವರ ನಿಮ್ಮನ್ನು ಮನರಂಜಿಸಲು 2 ಭಾಗಗಳಲ್ಲಿ ಮೂಡಿ ಬರಲಿದೆ. ಮೊದಲ ಭಾಗವು 2024ರ ಏಪ್ರಿಲ್ 5ರಂದು ಬಿಡುಗಡೆ ಆಗುತ್ತಿದೆ" ಎಂದು ಕೊರಟಾಲ ಶಿವ ಇತ್ತೀಚೆಗಗಷ್ಟೇ ಹೇಳಿಕೊಂಡಿದ್ದರು. ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ತಂಡಕ್ಕೆ ಸಿಕ್ಕ ಸ್ಫೂರ್ತಿ ಏನು ಎಂಬುದರ ಬಗ್ಗೆಯೂ ಚಿತ್ರ ನಿರ್ದೇಶಕರು ತೆಲುಗಿನಲ್ಲಿ ವಿವರಿಸಿದ್ದರು. "ಚಿತ್ರದ ಪ್ರತಿಯೊಂದು ಪಾತ್ರ ಪ್ರಾಮುಖ್ಯತೆ ಹೊಂದಿವೆ. ಪರಿಶೋಧನೆ ಕೂಡ ಅಷ್ಟೇ ಅಗತ್ಯವಿದೆ. ಒಂದೇ ಕಂತಿನೊಳಗೆ ಮುಗಿಸುವ ಕಥೆ ಇದಲ್ಲ. ಅದು ಅಸಾಧ್ಯವೆಂದು ತಿಳಿದ ಬಳಿಕ ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬರಲಾಯಿತು" ಎಂದು ಚಿತ್ರ ನಿರ್ದೇಶಕರೇ ಹೇಳಿಕೊಂಡಿದ್ದುಂಟು.
ಜೂನಿಯರ್ ಎನ್‌ಟಿಆರ್ ಜೊತೆ ಜಾನ್ವಿ ಕಪೂರ್, ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಭಾಗದ ಕಥಾ ಹಂದರವನ್ನು ಹೊತ್ತು ಬರುತ್ತಿರುವುದು ಚಿತ್ರದ ಮತ್ತೊಂದು ಗಮನಾರ್ಹ ಸಂಗತಿ. ಜಾನ್ವಿ ಕಪೂರ್ ಇದೇ ಮೊದಲ ಬಾರಿಗೆ ಎನ್‌ಟಿಆರ್ ಜೊತೆ ಪರದೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದ ಸಂಗೀತವನ್ನು ಅನಿರುದ್ಧ್ ರವಿಚಂದರ್ ನಿರ್ವಹಿಸಿದ್ದರೆ, ಆರ್. ರತ್ನವೇಲು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯ ನಟ ಶ್ರೀಕಾಂತ್, ಮುರಳಿ ಶರ್ಮಾ, ಪ್ರಕಾಶ್ ರಾಜ್, ಶೈನ್ ಟಾಮ್ ಚಾಕೋ, ಚೈತ್ರಾ ರಾಯ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಚಿತ್ರದ ಎರಡನೇ ಭಾಗ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಅಧಿಕೃತ ದಿನಾಂಕ ಇನ್ನೂ ಘೋಷಿಸಬೇಕಾಗಿದೆ. ಮತ್ತೊಂದೆಡೆ ದೇವರ ಚಿತ್ರದಲ್ಲಿ ಎನ್‌ಟಿಆರ್ ಜೊತೆ ನಂದಮೂರಿ ಕಲ್ಯಾಣ್ ರಾಮ್ ಕೂಡ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ, ಚಿತ್ರ ತಂಡ ಇದನ್ನು ಖಚಿತಪಡಿಸಿಲ್ಲ. ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ಬ್ಯಾನರ್‌ನಡಿಯಲ್ಲಿ ಈ ಚಿತ್ರ ತಯಾರಾಗುತ್ತಿದೆ.
ಇದನ್ನೂ ಓದಿ: ಎರಡು ಭಾಗಗಳಲ್ಲಿ ಮೂಡಿ ಬರಲಿದೆ ಜಾನ್ವಿ, ಜೂ.ಎನ್‌ಟಿಆರ್ ಅಭಿನಯದ 'ದೇವರ'