ಪ್ರತಿಷ್ಟಿತ ಆಸ್ಕರ್ ಸಮಾರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಆರ್‌ಆರ್‌ಆರ್ ಚಿತ್ರತಂಡ ಲಾಸ್ ಏಂಜಲೀಸ್ಗೆ ತೆರಳಿದೆ. ಸದ್ಯ ಭಾರತ ಸೇರಿದಂತೆ ವಿಶ್ವ ಸಿನಿ ರಂಗದ ಕಣ್ಣು ಪ್ರತಿಷ್ಟಿತ ಪ್ರಶಸ್ತಿ ಮೇಲೆ ನೆಟ್ಟಿದೆ.
ಭಾರತದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಸಾರಥ್ಯದಲ್ಲಿ ಮೂಡಿಬಂದ ಆ್ಯಕ್ಷನ್ ಚಿತ್ರ 'ಆರ್‌ಆರ್‌ಆರ್'ನ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ನಟ ರಾಮ್ಚರಣ್ ಮತ್ತು ನಿರ್ದೇಶಕ ರಾಜಮೌಳಿ ಮೊದಲು ಲಾಸ್ ಏಂಜಲೀಸ್ಗೆ ತೆರಳಿದರೆ, ನಟ ಜೂನಿಯರ್ ಎನ್‌ಟಿಆರ್ ನಂತರ ತಮ್ಮ ಚಿತ್ರತಂಡವನ್ನು ಸೇರಿಕೊಂಡಿದ್ದರು.
ರಾಷ್ಟ್ರವನ್ನು ಹೃದಯದಲ್ಲಿಟ್ಟುಕೊಂಡು ಹೆಜ್ಜೆ...: ಜೂನಿಯರ್ ಎನ್‌ಟಿಆರ್ ಸೇರಿದಂತೆ ಆರ್‌ಆರ್‌ಆರ್ ತಂಡ 95ನೇ ಅಕಾಡೆಮಿ ಪ್ರಶಸ್ತಿ ಬಗ್ಗೆ ಬಹಳಾನೇ ಉತ್ಸುಕರಾಗಿದ್ದಾರೆ. ವಿಶೇಷ ದಿನದ ಕುರಿತು ಮಾತನಾಡಿದ ಜೂನಿಯರ್ ಎನ್‌ಟಿಆರ್, ಮಾರ್ಚ್ 13 (ಭಾರತದ ಕಾಲಮಾನ ಪ್ರಕಾರ) ರಂದು ಅಮರಿಕದ ರೆಡ್ ಕಾರ್ಪೆಟ್ ಮೇಲೆ ಆರ್‌ಆರ್‌ಆರ್ ತಂಡವು ರಾಷ್ಟ್ರವನ್ನು ಹೃದಯದಲ್ಲಿಟ್ಟುಕೊಂಡು ಹೆಜ್ಜೆ ಹಾಕಲಿದೆ ಎಂದು ತಿಳಿಸಿದರು.
ಜೂನಿಯರ್ ಎನ್‌ಟಿಆರ್ ಬೆವರ್ಲಿ ಹಿಲ್ಸ್‌ನಿಂದ ತಮ್ಮ ಚಿತ್ರವನ್ನು ಹಂಚಿಕೊಂಡಾಗಿನಿಂದ, ಟ್ವಿಟ್ಟರ್‌ನಲ್ಲಿ ಅಭಿಮಾನಿಗಳು #ManofthemassesJrNTR ಎಂದು ಟ್ರೆಂಡಿಂಗ್ ಮಾಡುತ್ತಿದ್ದು, ಆಸ್ಕರ್ ಪ್ರಶಸ್ತಿ ಬಗ್ಗೆ ಬಹಳ ಉತ್ಸಾಹ ತೋರಿದ್ದಾರೆ. ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟ ಆಸ್ಕರ್‌ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದನ್ನು ನೋಡಲು ಎದುರು ನೋಡುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಕೂಡ ಇತ್ತೀಚೆಗೆ ಲಾಸ್ ಏಂಜಲೀಸ್ನ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು ಈ ಬಗ್ಗೆ ಬಹಳ ರೋಮಾಂಚನಗೊಂಡಿದ್ದೇನೆ, ಇಡೀ ರಾಷ್ಟ್ರವನ್ನು ತನ್ನ ಹೃದಯದಲ್ಲಿಟ್ಟುಕೊಂಡು ಮುನ್ನಡೆಯುತ್ತೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.