ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಿನ್ನೆ (ಏಪ್ರಿಲ್ 8) ರಂದು 41ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ಈ ನಡುವೆ ಅಲ್ಲು ಅವರ ಬರ್ತ್ಡೇ ವಿಶ್ವೊಂದು ಟ್ವಿಟರ್ನಲ್ಲಿ ವೈರಲ್ ಆಗುತ್ತಿದೆ. ಆರ್ಆರ್ಆರ್ ಖ್ಯಾತಿಯ ಜೂನಿಯರ್ ಎನ್ಟಿಆರ್ ಅಲ್ಲು ಅರ್ಜುನ್‌ಗೆ ಶುಭ ಹಾರೈಸಿರುವ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಜೂ.ಎನ್ಟಿಆರ್ ವಿಶ್ ಹೀಗಿದೆ..:"ನಿಮಗೆ ಜನ್ಮದಿನದ ಶುಭಾಶಯಗಳು ಬಾವಾ. ಹ್ಯಾವ್ ಎ ಗ್ರೇಟ್ ಒನ್" ಎಂದು ಟ್ವಿಟರ್ ಮೂಲಕ ಜೂ. ಎನ್ಟಿಆರ್ ವಿಶ್ ಮಾಡಿದ್ದಾರೆ. ಇದಕ್ಕೆ ಅಲ್ಲು ಅರ್ಜುನ್, "ನಿಮ್ಮ ಪ್ರೀತಿಯ ಶುಭಾಶಯಗಳಿಗೆ ಧನ್ಯವಾದಗಳು ಬಾವಾ.. ಬೆಚ್ಚಗಿನ ಅಪ್ಪುಗೆಗಳು" ಎಂದಿದ್ದಾರೆ. ಜೂ.ಎನ್ಟಿಆರ್ ಅಲ್ಲಿಗೆ ಬಿಡದೇ ತಮಾಷೆಯಾಗಿ, 'ಒಂದೇ ಅಪ್ಪುಗೆ? ಪಾರ್ಟಿ ಇಲ್ವಾ ಪುಷ್ಪ?' ಎಂದು ಹಾಸ್ಯದ ಎಮೋಜಿ ಜೊತೆಗೆ ಪ್ರಶ್ನಿಸಿದ್ದಾರೆ. ಇದಕ್ಕುತ್ತರವಾಗಿ ಅಲ್ಲು ಅರ್ಜುನ್, 'ವಸ್ತುನ್ನಾ (ಬರಲಿದೆ)' ಎಂದು ಕಣ್ಣೊಡೆಯುವ ಎಮೋಜಿನೊಂದಿಗೆ ಹೇಳಿದ್ದಾರೆ.
ಟ್ವಿಟರ್ನಲ್ಲಿ ಅಲ್ಲು ಅರ್ಜುನ್ ಮತ್ತು ಜೂ.ಎನ್ಟಿಆರ್ ಅವರ ಮೋಜಿನ ತಮಾಷೆ ಅಭಿಮಾನಿಗಳನ್ನು ರಂಜಿಸಿದೆ. ಫ್ಯಾನ್ಸ್ ಕೂಡ ಇದಕ್ಕೆ ಕಾಮೆಂಟ್ ಮಾಡುತ್ತಾ, ಲೈಕ್ಸ್ ನೀಡುತ್ತಾ ಎಂಜಾಯ್ ಮಾಡಿದ್ದಾರೆ. ನಟರ ಅಭಿಮಾನಿಗಳ ನಡುವೆ ಶಾಂತಿ ಕಾಪಾಡಿಕೊಳ್ಳಲು ಇದು ಸ್ವಾಗತಾರ್ಹ ಬದಲಾವಣೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.