ಚೆನ್ನೈ ಮೂಲದ ವೇಲ್ಸ್ ಗ್ರೂಪ್ನ ಅಂಗಸಂಸ್ಥೆಯಾದ ವೇಲ್ಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಭರಪೂರ ಮನರಂಜನೆ ನೀಡುವ ಉದ್ದೇಶದಿಂದ ಬಿಡದಿ ಬಳಿ 'ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್' ಎಂಬ ಥೀಮ್ ಪಾರ್ಕ್ ಪ್ರಾರಂಭಿಸುತ್ತಿದೆ. ಆಗಸ್ಟ್ 20ರಂದು ಥೀಮ್ ಪಾರ್ಕ್ ಲೋಕಾರ್ಪಣೆ ಆಗಲಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್, ನಟ ಶಿವ ರಾಜ್‌ಕುಮಾರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ರಾಮನಗರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
'ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್': ಬೆಂಗಳೂರು ಮತ್ತು ಮೈಸೂರು ನಡುವೆ ಇರುವ ಬಿಡದಿ ಸಮೀಪ ಸುಮಾರು 40 ಎಕರೆ ಪ್ರದೇಶದಲ್ಲಿ 'ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್' ಥೀಮ್ ಪಾರ್ಕ್ ನಿರ್ಮಿಸಲಾಗಿದೆ. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯಿಂದ 10 ನಿಮಿಷ ದೂರದಲ್ಲಿ ಈ ಜಾಲಿವುಡ್ ಸಿಗುತ್ತದೆ.
ಥೀಮ್ ಪಾರ್ಕ್ನಲ್ಲಿ ಸಿನಿಮಾ ಮತ್ತು ಸಾಹಸ ಚಿತ್ರಗಳಲ್ಲಿ ಬಳಸಲಾಗುವ ಸೆಟ್ಗಳು, ಬಾಲಿವುಡ್ ನಡೆದು ಬಂದ ಹಾದಿಯನ್ನು ನೋಡಬಹುದು. ಹಾಡು, ನೃತ್ಯ ಕಾರ್ಯಕ್ರಮಗಳು, ಲೈವ್ ಪ್ರದರ್ಶನಗಳೂ ಇರಲಿವೆ. ಜಾಲಿ ಐಲ್ಯಾಂಡ್ ಎಂಬ ವಾಟರ್ ಪಾರ್ಕ್ ಜಾಲಿವುಡ್ನ ಹೈಲೈಟ್ಸ್. ಥೀಮ್ ಪಾರ್ಕ್ನ ಹೃದಯ ಭಾಗದಲ್ಲಿರುವ ಐಲ್ಯಾಂಡ್ನಲ್ಲಿ ಸಮುದ್ರದ ಅಲೆಗಳನ್ನು ನೆನಪಿಸುವ ವೇವ್ ಪೂಲ್ ಇದೆ. ಮನರಂಜನೆಗಾಗಿ ಹಲವು ವಾಟರ್ ಸ್ಲೈಡ್ಗಳು, ಸ್ಪ್ಲಾಶ್ ಜೋನ್ಗಳು ಮತ್ತು ಆಟ ಆಡಿ ಸುಸ್ತಾದಾಗ ವಿಶ್ರಾಂತಿ ಪಡೆಯಲು ಪ್ರತ್ಯೇಕ ಸ್ಥಳಗಳಿವೆ.
ಸಿನಿಮಾ, ಮನರಂಜನೆ ಮತ್ತು ಸಾಹಸವಲ್ಲದೇ ನಿಮಗಿಷ್ಟವಾದ ಮತ್ತು ಸ್ವಾದಿಷ್ಟವಾದ ಉತ್ತರ ಭಾರತ, ದಕ್ಷಿಣ ಭಾರತ, ಚೈನೀಸ್, ಕಾಂಟಿನೆಂಟಲ್ ಮುಂತಾದ ತಿಂಡಿ-ತಿನಿಸುಗಳನ್ನು ಉಣಬಡಿಸುವ ರೆಸ್ಟೋರೆಂಟ್ಗಳು ಇವೆ. ಥೀಮ್ ಪಾರ್ಕ್ನ ಪ್ರವೇಶ ದರ, ಮಾರ್ಗ ಮುಂತಾದ ಹಲವು ವಿಷಯಗಳಿಗೆ ಸಂಸ್ಥೆಯ ಅಧಿಕೃತ ವೆಬ್ಸೈಟ್ www.jollywood.co.in ಲಾಗಿನ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಇದನ್ನೂ ಓದಿ:ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ದಾಖಲೆ.. ಭಾರತ್ ಎಕ್ಸ್ಪ್ರೆಸ್, ಮೈಸೂರು-ಬೆಂಗಳೂರು ದಶಪಥ ರಸ್ತೆಗೆ ಮೋದಿ ಮೆಚ್ಚುಗೆ