ಮುಂಬೈ: ಮಾಧ್ಯಮಗಳ ಮುಂದೆ ನಟಿ ಜಯಾ ಬಚ್ಚನ್ ಮಾತನಾಡುವುದು ಅಪರೂಪ. ಅದರಲ್ಲೂ ವೈಯಕ್ತಿಕ ವಿಷಯಗಳ ಹಂಚಿಕೆ ವಿಚಾರದಲ್ಲಿ ಅವರು ಕೊಂಚ ದೂರ. ಆದರೆ, ತಮ್ಮ ಮೊಮ್ಮಗಳು ನವ್ಯಾ ನವೇಲಿ ಜೊತೆ ಪಾಡ್ಕಾಸ್ಟ್ನಲ್ಲಿ ಅವರು ತಮ್ಮ ಮುಟ್ಟಿನ ವಿಚಾರದ ಕುರಿತ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ನವ್ಯಾ ನವೇಲಿಯ 'ವಾಟ್ ದಿ ಹೆಲ್ ನವ್ಯಾ' ಪಾಡ್ ಕಾಸ್ಟ್ನಲ್ಲಿ ಭಾಗಿಯಾಗಿದ್ದ ಹಿರಿಯ ನಟಿಗೆ ತಮ್ಮ ಮೊದಲ ಮುಟ್ಟಿನ ಬಗ್ಗೆ ಮೊಮ್ಮಗಳು ಪ್ರಶ್ನಿಸಿದ್ದಾಳೆ. ಈ ವೇಳೆ ಮಾತನಾಡಿದ ಜಯಾ ಬಚ್ಚನ್, ನನ್ನ ಮೊದಲ ಮುಟ್ಟಿನ ಬಗ್ಗೆ ನನಗೆ ಇನ್ನೂ ನೆನಪಿದೆ. ಮುಟ್ಟಿನ ಸಂದರ್ಭದಲ್ಲಿ ಶೂಟಿಂಗ್ ವೇಳೆ ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂದು ತಿಳಿಸಿದರು.
'ಸಿನಿಮಾ ಶೂಟಿಂಗ್ ಸೆಟ್ನಲ್ಲಿ ಪ್ಯಾಡ್ ಬದಲಾಯಿಸುವಾಗ ಸಾಕಷ್ಟು ಕಿರಿಕಿರಿಯಾಗುತ್ತಿತ್ತು. ಈಗಿನ ಕಾಲದಲ್ಲಿ ಉನ್ನತ ದರ್ಜೆಯ ಸೆಟ್ನಂತೆ ಆಗ ಇರಲಿಲ್ಲ. ಆಗಿನ ಕಾಲದಲ್ಲಿ ಸಿನಿಮಾ ಶೂಟಿಂಗ್ ವೇಳೆ ಸರಿಯಾದ ಮೂಲಭೂತ ಸೌಕರ್ಯಗಳು ಇರಲಿಲ್ಲ. ಮುಟ್ಟಿನ ವೇಳೆ ಸಿನಿಮಾ ಶೂಟಿಂಗ್ ಎಂಬುದು ಭಯಾನಕ ಅನುಭವ ಆಗಿರುತ್ತಿತ್ತು. ಔಟ್ಡೋರ್ ಶೂಟ್ ವೇಳೆ ಯಾವುದೇ ವ್ಯಾನಿಟಿ ವ್ಯಾನ್ ಇರಲಿಲ್ಲ. ಆಗ ನಾವು ಪೊದೆಗಳ ಮರೆಯಲ್ಲಿ ಪ್ಯಾಡ್ ಬದಲಾಯಿಸುತ್ತಿದ್ದೆವು. ಆಗ ಯಾವುದೇ ಶೌಚಾಲಯ ಕೂಡ ಇರುತ್ತಿರಲಿಲ್ಲ. ಈ ಸಂದರ್ಭದಲ್ಲಿ ನಾವು ಪ್ಯಾಡ್ ಬದಲಾಯಿಸಲು ಬಯಲು ಪ್ರದೇಶ ಅಥವಾ ಗುಡ್ಡ ಹತ್ತಬೇಕಾಗುತ್ತಿತ್ತು. ಇದು ತುಂಬಾ ಮುಜುಗರ ಆಗುತ್ತಿತ್ತು.