ವಿವಾದಗಳ ನಡುವೆ ಈ ವರ್ಷಾರಂಭದಲ್ಲಿ ತೆರೆಕಂಡ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರ ಪಠಾಣ್ ಸಿನಿಮಾ 1,000 ಕೋಟಿ ರೂ. ಕ್ಲಬ್ ಸೇರುವ ಮೂಲಕ ದಾಖಲೆ ಮೇಲೆ ದಾಖಲೆ ಬರೆದಿತ್ತು. ಇದೇ ವರ್ಷದಲ್ಲಿ ತೆರೆಕಾಣುತ್ತಿರುವ ಎಸ್ಆರ್ಕೆ ಮುಖ್ಯಭೂಮಿಕೆಯ ಮತ್ತೊಂದು ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ 'ಜವಾನ್'. ಸೂಪರ್ ಸ್ಟಾರ್ ಅಭಿನಯದ ಜವಾನ್ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲು ಸಜ್ಜಾಗುತ್ತಿದೆ. ಅಭಿಮಾನಿಗಳು ಸಿನಿಮಾ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ.
2023ರ ಜನವರಿ ಕೊನೆಯಲ್ಲಿ ತೆರೆಕಂಡ ಪಠಾಣ್ ಸಿನಿಮಾ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ. ಹಲವು ದಾಖಲೆ ಮುರಿದು, ಅತಿ ಹೆಚ್ಚು ಸಂಗ್ರಹ ಮಾಡಿರುವ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಹಾಗಾಗಿ ಸೂಪರ್ ಸ್ಟಾರ್ನ ಮುಂದಿನ ಸಿನಿಮಾ ಕ್ರೇಜ್ ದೊಡ್ಡ ಮಟ್ಟದಲ್ಲೇ ಇದೆ.
ಶಾರುಖ್ ಖಾನ್ ಜೊತೆ ನಯನತಾರಾ, ವಿಜಯ್ ಸೇತುಪತಿ ಸೇರಿದಂತೆ ಸ್ಟಾರ್ ನಟರು ಬಣ್ಣ ಹಚ್ಚಿದ್ದಾರೆ. ಬಿಗ್ ಸ್ಟಾರ್ ಕಾಸ್ಟ್ ಮಾತ್ರವಲ್ಲದೇ ವಿಶಿಷ್ಟ ಪ್ರದರ್ಶನ ವಿಚಾರವಾಗಿಯೂ ಜನರ ಗಮನ ಸೆಳೆದಿದೆ. ಹೌದು, ಮುಂಬೈನ ಖ್ಯಾತ ಚಿತ್ರಮಂದಿರ ಗೈಟಿ ಗ್ಯಾಲಾಕ್ಸಿಯಲ್ಲಿ ಬೆಳಗ್ಗೆ 6 ಗಂಟೆಗೆ ಜವಾನ್ ಸಿನಿಮಾವನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಇದು ಎಸ್ಆರ್ಕೆ ಕಟ್ಟಾ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಶಾರುಖ್ ಖಾನ್ ಯೂನಿವರ್ಸ್ ಫ್ಯಾನ್ ಕ್ಲಬ್ (ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ ಬಳಗ ಎಂದು ಗುರುತಿಸಿಕೊಂಡಿದೆ) ಪ್ರಕಾರ, ಹೆಚ್ಚು ಬೇಡಿಕೆ ಇರುವ ಥಿಯೇಟರ್ನಲ್ಲಿ ಈ ವಿಶೇಷ ಪ್ರದರ್ಶನ ಆಯೋಜನೆಗೊಳ್ಳಲಿದೆ.