ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಮತ್ತು ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಕಾಂಬೋದಲ್ಲಿ ಮೂಡಿಬಂದ 'ಜವಾನ್' ಸಿನಿಮಾ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಿ ವಿಶ್ವದಾದ್ಯಂತ ಧೂಳೆಬ್ಬಿಸುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡ ಚಿತ್ರ ಕಲೆಕ್ಷನ್ ವಿಚಾರದಲ್ಲಿ ಅಬ್ಬರದ ಓಟ ಮುಂದುವರೆಸಿದೆ. ಬಾದ್ ಶಾ ಸೇರಿದಂತೆ ನಯನತಾರಾ, ವಿಜಯ್ ಸೇತುಪತಿ ಅವರಿಗೂ 'ಜವಾನ್' ಉತ್ತಮ ಹೆಸರು ತಂದುಕೊಟ್ಟಿದೆ. ಜೊತೆಗೆ ದಿನಕ್ಕೊಂದು ದಾಖಲೆ ಬರೆಯುತ್ತಿದೆ.
ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ದಾಖಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಶಾರುಖ್ ಖಾನ್ ಅವರ 'ಜವಾನ್' ಚಿತ್ರ ಭಾರತದಲ್ಲಿ ನಾಲ್ಕನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ ಎಂದು ತಿಳಿಸಿದ್ದಾರೆ. ಬಾಹುಬಲಿ 2, ಗದರ್ 2 ಮತ್ತು ಪಠಾಣ್ ನಂತರ 'ಜವಾನ್' ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಾಲ್ಕನೇ ಚಿತ್ರವಾಗಿದೆ. ಭಾರಿ ಕಲೆಕ್ಷನ್ ಮಾಡುವ ಮೂಲಕ ಯಶ್ ಅವರ ಕೆಜಿಎಫ್ 2 ಅನ್ನು ಹಿಂದಿಕ್ಕಿದೆ.
'ಜವಾನ್' ಸಿನಿಮಾ ಶುಕ್ರವಾರ 18.10 ಕೋಟಿ ರೂಪಾಯಿ, ಶನಿವಾರ 30.10 ಕೋಟಿ ರೂ., ಭಾನುವಾರ 34.26 ಕೋಟಿ ರೂ., ಸೋಮವಾರ 14.25 ಕೋಟಿ ರೂಪಾಯಿ ಗಳಿಸಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಇದುವರೆಗೆ ಒಟ್ಟು 444.69 ಕೋಟಿ ರೂಪಾಯಿ ಗಳಿಸಿದೆ. ವಿಶ್ವದಾದ್ಯಂತ 1000 ಕೋಟಿ ರೂಪಾಯಿ ದಾಟಲು ಹೆಚ್ಚೇನು ದಿನ ದೂರವಿಲ್ಲ. ಕೆಲವೇ ದಿನಗಳಲ್ಲಿ ಜವಾನ್ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ದಿನಕ್ಕೊಂದು ದಾಖಲೆಯನ್ನು ಬರೆಯುತ್ತಾ ಇತಿಹಾಸವನ್ನು ಬರೆಯುತ್ತಿದೆ.