'ಪಠಾಣ್' ಸೂಪರ್ ಹಿಟ್ ನಂತರ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ 'ಜವಾನ್'. ಖ್ಯಾತ ತಮಿಳು ನಿರ್ದೇಶಕ ಅಟ್ಲೀ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಇಂದು (ಸೆಪ್ಟಂಬರ್ 7) ತೆರೆ ಕಂಡಿದೆ. ದೇಶದ ಹಲವು ಕಡೆಗಳಲ್ಲಿ ಚಿತ್ರವು ಗುರುವಾರ ಬೆಳಗ್ಗೆ 6 ಗಂಟೆಯ ಶೋದೊಂದಿಗೆ ಬಿಡುಗಡೆಯಾಯಿತು. ಸಿನಿಮಾ ವೀಕ್ಷಿಸಿದ ಶಾರುಖ್ ಅಭಿಮಾನಿಗಳು ಈಗಾಗಲೇ 'ಜವಾನ್' ಅನ್ನು ಬ್ಲಾಕ್ಬಸ್ಟರ್ ಎಂದು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ 'ಜವಾನ್' ವಿಮರ್ಶೆಗಳ ಸುರಿಮಳೆಯೇ ಆಗುತ್ತಿದೆ.
ಹೇಗಿದೆ ಸಿನಿಮಾ..? 'ಜವಾನ್' ಸಿನಿಮಾ ವೀಕ್ಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಎಕ್ಸ್ ಅನ್ನು ವೇದಿಕೆಯನ್ನಾಗಿ ಬಳಸಿಕೊಂಡರು. ಪ್ರೇಕ್ಷಕರ ಪ್ರಕಾರ, ಚಿತ್ರದಲ್ಲಿನ ಶಾರುಖ್ ಖಾನ್ ನಟನೆಯು ಈ ಮೊದಲಿನ ಎಲ್ಲಾ ಸಿನಿಮಾಗಿಂತ ನೆಕ್ಸ್ಟ್ ಲೆವೆಲ್ನಲ್ಲಿದೆ. ಅಟ್ಲೀ ಅವರ ಕಥೆಯು ಅತ್ಯಂತ ಆಕರ್ಷಕವಾಗಿದ್ದು, ಉತ್ತಮವಾಗಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯ್ ಸೇತುಪತಿ ಬಗ್ಗೆ ಹೇಳಬೇಕೆಂದಿಲ್ಲ. ಅತ್ಯದ್ಭುತವಾಗಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ.
ದೀಪಿಕಾ ಪಡುಕೋಣೆ ತಮ್ಮ ಪಾತ್ರಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ನಯನತಾರಾ ಚಿತ್ರದಲ್ಲಿ ವಿಶೇಷ ಗಮನ ಸೆಳೆದಿದ್ದು, ಅತ್ಯುತ್ತಮ ನಟನೆಯನ್ನು ನೀಡಿದ್ದಾರೆ. ಅನಿರುದ್ಧ್ ಚಂದರ್ ಸಂಗೀತ ಸಂಯೋಜನೆ 'ಜವಾನ್' ಸಿನಿಮಾವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿದೆ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಸಹ, ಒಟ್ಟಾರೆಯಾಗಿ ಚಿತ್ರವು ಬ್ಲಾಕ್ಬಸ್ಟರ್ ಆಗಿದೆ. ಶಾರುಖ್ ಅಭಿಮಾನಿಗಳು 'ಜವಾನ್' ಮೇಲೆ ಇಟ್ಟುಕೊಂಡಿದ್ದ, ನಿರೀಕ್ಷೆ ಹುಸಿಯಾಗದೆ ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ಮನರಂಜನೆ ನೀಡಿದೆ.
ಇದನ್ನೂ ಓದಿ:Jawan collection: ಜವಾನ್ ಮೊದಲ ದಿನ 100 ಕೋಟಿ ದಾಟುತ್ತಾ - ಪಠಾಣ್ ದಾಖಲೆ ಪುಡಿಗಟ್ಟುತ್ತಾ?