ಸೌತ್ ಮತ್ತು ಬಾಲಿವುಡ್ ಕಾಂಬಿನೇಶನ್ನಲ್ಲಿ ಮೂಡಿಬಂದ ಜವಾನ್ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ತೆರೆಕಂಡು 12 ದಿನಗಳಾಗಿದ್ದು, ಬಾಕ್ಸ್ ಆಫೀಸ್ ಸಂಖ್ಯೆ ನಿರ್ಮಾಪಕರ ಖುಷಿ ಹೆಚ್ಚಿಸುತ್ತಿದೆ. ಈ ಮೂಲಕ ಸಿನಿಮಾ ಮಂದಿರಗಳಲ್ಲಿ ಜವಾನ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಆ್ಯಕ್ಷನ್, ಥ್ರಿಲ್ಲರ್ 'ಜವಾನ್' ಈಗಾಗಲೇ ಹಲವು ದಾಖಲೆಗಳನ್ನು ಪುಡಿಗಟ್ಟಿದೆ. ಸೆಪ್ಟೆಂಬರ್ 7 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿತು. ಬಿಡುಗಡೆಯಾದ ಎರಡು ವಾರಗಳ ನಂತರವೂ ಉತ್ತಮ ಪ್ರದರ್ಶನ ನೀಡುತ್ತಿದೆ. 13ನೇ ದಿನದ ಸಿನಿಮಾ ಪ್ರದರ್ಶನ ಸಾಗುತ್ತಿದ್ದು, 12 ದಿನಗಳಲ್ಲಿ ಚಿತ್ರದ ಕಲೆಕ್ಷನ್ ಅಂಕಿ ಅಂಶ 500 ಕೋಟಿ ರೂ. ಸಮೀಪಿಸಿದೆ.
ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈವರೆಗೆ ಭಾರತೀಯ ಮಾರುಕಟ್ಟೆಯಲ್ಲಿ 491.63 ಕೋಟಿ ರೂ. ಸಂಪಾದನೆ ಆಗಿದೆ. ಇಂದು ದೇಶೀಯ ಗಲ್ಲಾಪಟ್ಟಿಗೆಯಲ್ಲಿ 12.16 ಕೋಟಿ ರೂ. ಗಳಿಸುವ ಸಾಧ್ಯತೆ ಇದೆ. ಹಾಗಾದಲ್ಲಿ, ಭಾರತೀಯ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂ. ಗಡಿ ದಾಟಲಿದೆ. ಶಾರುಖ್ ಅವರ ಹಿಂದಿನ ಪಠಾಣ್ ಸಿನಿಮಾ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ, 23ನೇ ದಿನ 500 ಕೋಟಿ ರೂ. ಗಡಿ ದಾಟಿತ್ತು.
ಇತ್ತೀಚೆಗೆ ಜವಾನ್ ಸಕ್ಸಸ್ ಪ್ರೆಸ್ ಮೀಟ್ ನಡೆದಿತ್ತು. ಅಟ್ಲೀ ಕುಮಾರ್ ಅಂದು ಚಿತ್ರದ ಬಜೆಟ್ ಬಹಿರಂಗಪಡಿಸಿದ್ದರು. 300 ಕೋಟಿ ರೂ. ಅಧಿಕ ಬಂಡವಾಳ ಹೂಡಲಾಗಿದೆ ಎಂದು ತಿಳಿಸಿದ್ದು, ಸದ್ಯ ಹಾಕಿದ ಹಣ ವಾಪಸ್ ಬಂದಂತಾಗಿದೆ. ಶುಕ್ರವಾರ ನಡೆದ ಸಕ್ಸಸ್ ಪಾರ್ಟಿಯಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಅನಿರುಧ್ ರವಿಂದರ್ ಉಪಸ್ಥಿತರಿದ್ದರು. ವೈಯಕ್ತಿಕ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಯನತಾರಾ ಅವರು ಪಾರ್ಟಿಯಲ್ಲಿ ಗೈರಾಗಿದ್ದರು. ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ, ಅಭಿಮಾನಿಗಳು ಮತ್ತು ವಿಮರ್ಷಕರಿಂದ ಸಕಾರಾತ್ಮಕ ವಿಮರ್ಷೆ ಪಡೆದುಕೊಂಡಿದೆ.
ಇದನ್ನೂ ಓದಿ:ಪರಿಣಿತಿ-ರಾಘವ್ ಮದುವೆ: ವರನ ಮನೆಗೆ ವಿಶೇಷ ಶೃಂಗಾರ- ವಿಡಿಯೋ ನೋಡಿ!
ಎಸ್ಆರ್ಕೆ ಅವರ ಝೀರೋ ಸಿನಿಮಾ 2018ರ ಡಿಸೆಂಬರ್ನಲ್ಲಿ ತೆರೆಕಂಡಿತ್ತು. ನಾಲ್ಕು ವರ್ಷಗಳ ಬ್ರೇಕ್ ಪಡೆದ ಬಿಗ್ ಸ್ಟಾರ್ ಪಠಾಣ್ ಮೂಲಕ ಬಿಗ್ ಸ್ಕ್ರೀನ್ಗೆ ಮರಳಿದರು. ಇದೇ ಸಾಲಿನ ಜನವರಿಯಲ್ಲಿ ತೆರೆಕಂಡ ಪಠಾಣ್ ಸೂಪರ್ ಡೂಪರ್ ಹಿಟ್ ಆಯಿತು. ಶಾರುಖ್ ನಟಿಸಿದ ಮೊದಲ ಆ್ಯಕ್ಷನ್ ಚಿತ್ರವಿದು. ಬಳಿಕ ಬಂದ ಜವಾನ್ ಕೂಡ ಕಂಪ್ಲೀಟ್ ಆ್ಯಕ್ಷನ್ ಸಿನಿಮಾ. ಶಾರುಖ್ ದಂಪತಿಯ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಚಿತ್ರಕ್ಕೆ ಬಂಡವಾಳ ಹೂಡಿದೆ. ಮೊದಲ ಬಾರಿಗೆ ದಕ್ಷಿಣ ಚಿತ್ರರಂಗದವರೊಂದಿಗೆ ಕೈ ಜೋಡಿಸಿ ಶಾರುಖ್ ಮಾಡಿದ ಸಿನಿಮಾವಿದು. ನಟನ ಮತ್ತೊಂದು ಚಿತ್ರ ಡಂಕಿ ಕೂಡ ಇದೇ ಸಾಲಿನಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ:'ಪಿಚ್ಚಕಾರನ್' ಸಿನಿಮಾ ಖ್ಯಾತಿಯ ನಟ ವಿಜಯ್ ಆ್ಯಂಟನಿ ಪುತ್ರಿ ಸಾವು