ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಅಟ್ಲೀ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ. ಸೆಪ್ಟಂಬರ್ 7ರಂದು ತೆರೆಕಂಡ ಚಿತ್ರ ಮೊದಲ ದಿನದ ಗಳಿಕೆಯಲ್ಲೇ ಹೊಸ ದಾಖಲೆಯನ್ನು ಬರೆದಿದೆ. ಶಾರುಖ್ ಹೊರತುಪಡಿಸಿ, ನಯನತಾರಾ, ವಿಜಯ್ ಸೇತುಪತಿ ಅವರಿಗೂ 'ಜವಾನ್' ಉತ್ತಮ ಹೆಸರು ತಂದುಕೊಟ್ಟಿದೆ. ಎರಡು ದಿನದ ಕಲೆಕ್ಷನ್ನೊಂದಿಗೆ ಸಿನಿಮಾವು ಭಾರತದಲ್ಲಿ 100 ಕೋಟಿ ರೂ. ಗಡಿ ದಾಟಿದೆ.
'ಜವಾನ್' ಕಲೆಕ್ಷನ್': 'ಜವಾನ್' ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದೆ. ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರ ಫಸ್ಟ್ ಡೇ 74.5 ಕೋಟಿ ರೂಪಾಯಿಗೂ ಹೆಚ್ಚು ಸಂಪಾದಿಸಿದೆ. ಸಿನಿಮಾವು ಹಿಂದಿ ಭಾಷೆಯಲ್ಲಿ 65.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಉಳಿದ ಮೊತ್ತವು ಸಿನಿಮಾದ ಆವೃತ್ತಿಯಿಂದ ಬಂದಿದೆ. ವಿಶ್ವದಾದ್ಯಂತ ಮೊದಲ ದಿನವೇ ಚಿತ್ರವು 100 ಕೋಟಿ ಕ್ಲಬ್ ಸೇರಿದೆ. ಚಿತ್ರ ಸುಮಾರು 129.6 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಸ್ಯಾಕ್ನಿಲ್ ಅಂದಾಜು ವರದಿಯ ಪ್ರಕಾರ, ಜವಾನ್ ಆರಂಭಿಕ ದಿನಕ್ಕಿಂತ ಎರಡನೇ ದಿನ ಕಡಿಮೆ ಗಳಿಸಿದೆ. ಚಿತ್ರವು ಸೆಕೆಂಡ್ ಡೇ ಒಟ್ಟು 50.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಅಂದಾಜು ಸರಿಯಾದಲ್ಲಿ ಚಿತ್ರ ಒಟ್ಟು ಭಾರತದ ಬಾಕ್ಸ್ ಆಫೀಸ್ನಲ್ಲಿ 125 ಕೋಟಿ ರೂಪಾಯಿ ಸಂಗ್ರಹಿಸಿದೆ. ವಿಶ್ವದಾದ್ಯಂತ ನೋಡುವುದಾದರೆ, ಚಿತ್ರವು 200 ಕೋಟಿ ರೂಪಾಯಿಗಳನ್ನು ದಾಟಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇಂದು ಮತ್ತು ನಾಳೆ ಕಲೆಕ್ಷನ್ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.