ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ 'ಜವಾನ್' ಸಿನಿಮಾ ಬಿಡುಗಡೆಯಾದ 10 ದಿನಗಳ ನಂತರವೂ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆ್ಯ ಕ್ಷನ್ ಥ್ರಿಲ್ಲರ್ ಚಿತ್ರವು ಭಾರತದ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂಪಾಯಿ ಗಡಿ ದಾಟುವ ಅಂಚಿನಲ್ಲಿದೆ. ಅದಾಗ್ಯೂ 12ನೇ ದಿನಕ್ಕೆ ಕಲೆಕ್ಷನ್ನಲ್ಲಿ ಕೊಂಚ ಕುಸಿತ ಕಂಡರೂ ಸಹ 500 ಕೋಟಿ ಕ್ಲಬ್ ಸೇರುವುದು ಮಾತ್ರ ಪಕ್ಕಾ ಎನ್ನಲಾಗಿದೆ.
ಸಿನಿ ಉದ್ಯಮದ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಜವಾನ್ ಸಿನಿಮಾ ಭಾರತದಲ್ಲಿ 11 ದಿನಗಳಲ್ಲಿ ಸುಮಾರು 477.3 ಕೋಟಿ ರೂಪಾಯಿ ಗಳಿಸಿದೆ. 12ನೇ ದಿನವಾದ ಇಂದು ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ 14 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಆ ಪ್ರಕಾರವಾಗಿ ಚಿತ್ರದ ಪ್ರಸ್ತುತ ಒಟ್ಟು ಮೊತ್ತ 491.63 ಕೋಟಿ ರೂಪಾಯಿಯಾಗಿದೆ. ಒಟ್ಟಾರೆಯಾಗಿ ನೋಡುವುದಾದರೆ, ಚಿತ್ರವು ಇಂದು ಭಾರತದಲ್ಲಿ 500 ಕೋಟಿ ರೂಪಾಯಿ ಗಡಿ ದಾಟುವ ಸಾಧ್ಯತೆಯಿದೆ.
'ಜವಾನ್' ಸಿನಿಮಾವನ್ನು 300 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ. ಚಿತ್ರವೂ ಎಲ್ಲರನ್ನೂ ಮೆಚ್ಚಿಸಿದೆ. ರಾಷ್ಟ್ರ ಮಾತ್ರವಲ್ಲದೇ ವಿಶ್ವದಾದ್ಯಂತ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ. ಶಾರುಖ್ ಖಾನ್ ಅವರಿಗೆ ಮಾತ್ರವಲ್ಲದೇ, ಜವಾನ್ ಸಿನಿಮಾ ವಿಜಯ್ ಸೇತುಪತಿ ಮತ್ತು ನಯನತಾರಾ ಅವರಿಗೂ ಒಂದೊಳ್ಳೆ ಹೆಸರನ್ನು ತಂದುಕೊಟ್ಟಿದೆ.
11ನೇ ದಿನದ ಕಲೆಕ್ಷನ್: 'ಜವಾನ್' ಸಿನಿಮಾದ ಕಲೆಕ್ಷನ್ ಸ್ವಲ್ಪವೂ ನಿಂತಿಲ್ಲ. ಭಾನುವಾರ (ಸೆಪ್ಟೆಂಬರ್ 17) ವೀಕೆಂಡ್ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿತ್ರ ವೀಕ್ಷಿಸಿದ್ದಾರೆ. ದೇಶಾದ್ಯಂತ 36.52 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಈ ಮೂಲಕ ಚಿತ್ರವು ಒಟ್ಟು 477.28 ಕೋಟಿ ರೂಪಾಯಿ ಸಂಗ್ರಹಿಸಿದೆ. ವಿಶ್ವದಾದ್ಯಂತ ಒಟ್ಟು 840 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ. 800 ಕೋಟಿ ರೂಪಾಯಿ ಗಳಿಸಿದ ಏಕೈಕ ಹಿಂದಿ ಚಿತ್ರ ಇದಾಗಿದೆ.
ಸಿನಿ ವ್ಯವಹಾರ ವಿಶ್ಲೇಷಕ ರಮೇಶ್ ಬಾಲಾ ಪ್ರಕಾರ, ಜವಾನ್ ಸಾವಿರ ಕೋಟಿ ರೂ. ಕ್ಲಬ್ ಸೇರಿದರೆ, ಹಿಂದಿ ಚಿತ್ರರಂಗಕ್ಕೆ ಇದೊಂದು ಅಪರೂಪದ ಘಟನೆ ಆಗಲಿದೆ. ಏಕೆಂದರೆ, ಶಾರುಖ್ ಅವರ ಈ ಹಿಂದಿನ ಸಿನಿಮಾ ಪಠಾಣ್ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1,000 ಕೋಟಿ ರೂ. ವ್ಯವಹಾರ ನಡೆಸಿದೆ. ಜವಾನ್ ಸಿನಿಮಾ ಕೂಡ ಸಾವಿರ ಕೋಟಿ ರೂ. ಸಂಪಾದನೆ ಮಾಡಿದ್ರೆ, ಒಂದೇ ವರ್ಷದಲ್ಲಿ ಓರ್ವ ನಟನ ಎರಡೂ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆದಂತಾಗುತ್ತದೆ. ಶಾರುಖ್ ನಟನೆಯ ಮತ್ತೊಂದು ಸಿನಿಮಾ 'ಡಂಕಿ' ಕೂಡ ಇದೇ ಸಾಲಿನ ಕ್ರಿಸ್ಮಸ್ ಸಂದರ್ಭ ತೆರೆಕಾಣಲಿದೆ.
ಶಾರುಖ್ ಹಾಗೂ ಗೌರಿ ದಂಪತಿಯ ಚಲನಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಜವಾನ್ ಚಿತ್ರಕ್ಕೆ ಬಂಡವಾಳ ಹೂಡಿದೆ. ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಯಿತು. ಕಿಂಗ್ ಖಾನ್ ಜೊತೆ ಸೌತ್ ಲೇಡಿ ಸೂಪರ್ಸ್ಟಾರ್ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್ ನಟಿ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ 400, ವಿಶ್ವದಲ್ಲಿ 700: ಸಾವಿರ ಕೋಟಿ ರೂ. ಕಲೆಕ್ಷನ್ ಮಾಡುತ್ತಾ 'ಜವಾನ್'?!